ನಾಯಿಯನ್ನು ಬೆನ್ನಟ್ಟಿ ಬಂದ ಚಿರತೆಯು ಬಾವಿಗೆ ಬಿದ್ದಿದ್ದು, ಮೋಟರ್‌ನ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ ಘಟನೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಮೆನ್ನಬೆಟ್ಟು ಗ್ರಾಮದಲ್ಲಿ ಜುಲೈ 28ರ ಮುಂಜಾನೆ ನಡೆದಿದೆ.
ಮೆನ್ನಬೆಟ್ಟು ನಿವಾಸಿ ರೋಬರ್ಟ್ ಅವರು ಜು.28ರ ಮುಂಜಾನೆ 5.30ಕ್ಕೆ ಎದ್ದು ನೀರಿಗಾಗಿ ಬಾವಿಯ ಮೋಟರ್ ಚಾಲನೆ ಮಾಡಿದ್ದಾರೆ. ಸುಮಾರು 20 ನಿಮಿಷವಾದರೂ ನೀರು ಬಾರದ ಕಾರಣ ಬಾವಿಗೆ ಇಣುಕಿ ನೋಡಿದಾಗ ಚಿರತೆ ತೇಲಾಡುತ್ತಿರುವುದು ಕಂಡು ಬಂದಿದೆ. ಕೂಡಲೇ ಮೋಟರನ್ನು ಬಂದ್ ಮಾಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಸ್ವಲ್ಪ ಹೊತ್ತು ಕಳೆದ ಬಳಿಕ ಮತ್ತೆ ಬಾವಿ ಇಣುಕಿ ನೋಡಿದಾಗ ಚಿರತೆ ಮೋಟರಿಗೆ ಅಳವಡಿಸಿರುವ ವಯರನ್ನು ಕಚ್ಚಿ ಹಿಡಿದಿರುವುದು ಕಂಡುಬಂದಿದೆ. ಬಳಿಕ ಅರಣ್ಯಾಧಿಕಾರಿಗಳು, ಪಶುವೈದ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಚಿರತೆ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ರೋಬರ್ಟ್ ಅವರ ಮನೆಯಲ್ಲಿ 4 ನಾಯಿಗಳಿದ್ದು, ರಾತ್ರಿ ಗೂಡಿಗೆ ಹಾಕುತ್ತಾರೆ. ಪಕ್ಕದ ಮನೆಯವರು ತಮ್ಮ ನಾಯಿಯನ್ನು ಬಿಟ್ಟಿರುತ್ತಾರೆ. ಚಿರತೆಯು ರಾತ್ರಿ ನಾಯಿಯನ್ನು ಅಟ್ಟಿಸಿಕೊಂಡು ಬಂದು ಬಾವಿಗೆ ಬಿದ್ದಿರಬಹುದೆಂದು ಶಂಕೆ ವ್ಯಕ್ತಪಡಿಸಲಾಗಿದೆ.
ಪಂಪ್‌ಗೆ ಅಳವಡಿಸಿದ್ದ ಪೈಪ್ ಮತ್ತು ಮೋಟಾರು ಪಂಪ್ ಅನ್ನು ಕಟ್ಟಿರುವ ಹಗ್ಗದ ಸಹಾಯದಿಂದ ಚಿರತೆ ಮೇಲಕ್ಕೇರಲು ಪ್ರಯತ್ನಿಸಿದ್ದು, ಹಗ್ಗ ಮತ್ತು ಪೈಪನ್ನು ಕಚ್ಚಿ ತುಂಡರಿಸಿದೆ. ಬಾವಿಯ ಅಂಕಣದ ಮೂಲಕ ಕೂಡ ಮೇಲಕ್ಕೆ ಬರಲು ಪ್ರಯತ್ನಿಸಿದ್ದು, ಅಂಕಣ ಕುಸಿದಿದೆ ಎಂದು ತಿಳಿದುಬಂದಿದೆ. ಅರಣ್ಯಾಧಿಕಾರಿಗಳು ಚಿರತೆಯನ್ನು ಮೇಲಕ್ಕೆತ್ತಿ ಶವ ಪರೀಕ್ಷೆ ನಡೆಸಿದ್ದಾರೆ ಎಂದು ವರದಿಯಾಗಿದೆ.

