ಶಿಕ್ಷಣವು ಇಂದಿನ ದಿನಗಳಲ್ಲಿ ಬಂಡವಾಳಶಾಹಿಗಳ ಕೈಯಲ್ಲಿ ಸಿಲುಕಿ ಬರಿ ವ್ಯಾಪಾರವಾಗಿ ಮಾರ್ಪಡುತ್ತಿರುವ ಈ ಕಾಲಘಟ್ಟದಲ್ಲಿ, ಕರುನಾಡಿನಾದ್ಯಂತ

ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನವು ಒಂದು ಕಿಚ್ಚಾಗಿ ಪರಿಣಮಿಸಿದೆ. ಸರ್ಕಾರಿ ಶಾಲೆಗಳ ಅಸ್ತಿತ್ವ ಮತ್ತು ಕನ್ನಡದ ಉಳಿವಿಗಾಗಿ ಹಗಲಿರುಳು ಶ್ರಮಿಸುತ್ತಿರುವ ಈ ಅಭಿಯಾನವು ಈಗ ಜನಸಾಮಾನ್ಯರ ಧ್ವನಿಯಾಗಿ ಮಾರ್ಪಟ್ಟಿದೆ.

ವೈರಲ್ ಕ್ರಾಂತಿ ಗೀತೆ

ಜನಸಾಮಾನ್ಯರಲ್ಲಿ ಚಿಂತನ-ಮಂಥನ
ಈ ಅಭಿಯಾನದ ಭಾಗವಾಗಿ ರಚಿಸಲಾದ ‘ಕ್ರಾಂತಿ ಗೀತೆ’ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ನಾಡಿನಾದ್ಯಂತ ನವ ಸಂಚಲನವನ್ನು ಸೃಷ್ಟಿಸುತ್ತಿದೆ. ಕೇವಲ ಮನರಂಜನೆಯಾಗಿ ಉಳಿಯದೆ, ಈ ಹಾಡಿನ ಪ್ರತಿಯೊಂದು ಸಾಲುಗಳು ಜನಸಾಮಾನ್ಯರನ್ನು ಆಳವಾಗಿ ಚಿಂತಿಸುವಂತೆ ಮಾಡಿದೆ. “ನಮ್ಮ ಕನ್ನಡ ಶಾಲೆಗಳೇಕೆ ಹೀಗಾಗಿವೆ?” ಎಂಬ ಪ್ರಶ್ನೆಯನ್ನು ಪ್ರತಿಯೊಬ್ಬ ಕನ್ನಡಿಗನ ಆತ್ಮಸಾಕ್ಷಿಗೆ ತಟ್ಟುವಂತೆ ಮಾಡುವಲ್ಲಿ ಈ ಹಾಡು ಯಶಸ್ವಿಯಾಗಿದೆ. ಇದು ಬರಿ ಹಾಡಾಗಿ ಉಳಿಯದೆ, ಅಕ್ಷರ ಲೋಕದ ಹೋರಾಟಕ್ಕೆ ಸ್ಪೂರ್ತಿಯ ಸೆಲೆಯಾಗಿದೆ.

ಪೋಷಕರಲ್ಲಿ ಮೂಡಿದ ಭರವಸೆಯ ಕಿರಣ
ಇಷ್ಟು ದಿನಗಳ ಕಾಲ ಖಾಸಗಿ ಶಾಲೆಗಳ ಶುಲ್ಕ ಭರಿಸಲು ಸಾಲದ ಸುಳಿಗೆ ಸಿಲುಕುತ್ತಿದ್ದ ಪೋಷಕರಲ್ಲಿ ಈ ಅಭಿಯಾನವು ಈಗ ಹೊಸ ಭರವಸೆಯ ಕಿರಣವನ್ನು ಮೂಡಿಸಿದೆ.

ಶಿಕ್ಷಣಕ್ಕಾಗಿ ಸಾಲಗಾರರಾಗುತ್ತಿದ್ದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ, ನಮ್ಮ ಸರ್ಕಾರಿ ಶಾಲೆಗಳೂ ಸಹ ಗುಣಮಟ್ಟದ ಶಿಕ್ಷಣ ನೀಡಬಲ್ಲವು ಎಂಬ ನಂಬಿಕೆ ತುಸು ತಡವಾಗಿಯಾದರೂ ಈಗ ದೃಢವಾಗುತ್ತಿದೆ. ಖಾಸಗಿ ವ್ಯಾಮೋಹ ಬಿಟ್ಟು ತಮ್ಮೂರಿನ ಶಾಲೆಯನ್ನೇ ಕಟ್ಟಲು ಪೋಷಕರು ಮುಂದಾಗುತ್ತಿರುವುದು ಈ ಕ್ರಾಂತಿಯ ದೊಡ್ಡ ಗೆಲುವು.

ಮೂಲಭೂತ ಸೌಕರ್ಯಗಳ ಕ್ರಾಂತಿ

ಬರಿ ಭಾಷಣಕ್ಕೆ ಸೀಮಿತವಾಗದ ಈ ಅಭಿಯಾನವು, ಮೂಲಭೂತ ಸೌಕರ್ಯಗಳಿಂದ ವಂಚಿತವಾದ ಸರ್ಕಾರಿ ಶಾಲೆಗಳಿಗೆ ಜಾರುಬಂಡಿ, ಆಟಿಕೆ ಸಾಮಗ್ರಿಗಳನ್ನು ವಿತರಿಸುವ ಮೂಲಕ ಶಾಲಾ ಆವರಣವನ್ನು ಆಕರ್ಷಕವಾಗಿ ಮಾಡುತ್ತಿದೆ. ಈ ಸೌಲಭ್ಯಗಳ ಉದ್ಘಾಟನಾ ಸಮಾರಂಭಗಳನ್ನು ‘ಜನಜಾಗೃತಿ ಸಮಾವೇಶ’ಗಳನ್ನಾಗಿ ಪರಿವರ್ತಿಸಿ, ಸರ್ಕಾರಿ ಶಾಲೆಗಳ ಮಹತ್ವವನ್ನು ಜನರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ.

ವ್ಯವಸ್ಥೆಯ ವಿರುದ್ಧದ ನೇರ ಪ್ರಶ್ನೆಗಳು

ಬಡವರಿಗೊಂದು ಶಿಕ್ಷಣ, ಶ್ರೀಮಂತರಿಗೊಂದು ಶಿಕ್ಷಣ ಎಂಬ ದ್ವಂದ್ವ ನೀತಿ ಏಕಿರಬೇಕು?

ಅಧಿಕಾರಿಗಳ ಮಕ್ಕಳು ಸರ್ಕಾರಿ ಶಾಲೆಗೆ ಏಕೆ ಬರುತ್ತಿಲ್ಲ?” ಎಂಬ ಕಟುವಾದ ಪ್ರಶ್ನೆಯನ್ನು ಈ ಅಭಿಯಾನವು ಸಮಾಜದ ಮುಂದಿಟ್ಟಿದೆ.

ನಗರದ ಶ್ರೀಮಂತ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗುತ್ತಿರುವ ಆಧುನಿಕ ತಂತ್ರಜ್ಞಾನದ ಸೌಲಭ್ಯಗಳು ಹಳ್ಳಿಯ ಕಟ್ಟಕಡೆಯ ಮಗುವಿಗೂ ಸಿಗಬೇಕು ಎಂಬುದು ಈ ತಂಡದ ಪ್ರಮುಖ ಆಗ್ರಹವಾಗಿದೆ.

ಸಾರ್ವಜನಿಕರ ಶ್ಲಾಘನೆ

ಒಟ್ಟಾರೆಯಾಗಿ, ‘ಕನ್ನಡ ಶಾಲೆ ಉಳಿಸಿ ಬೆಳೆಸಿ’ ಅಭಿಯಾನವು ಕೇವಲ ಒಂದು ಸಂಘಟನೆಯ ಕೆಲಸವಾಗಿ ಉಳಿಯದೆ, ನಾಡು-ನುಡಿ ಮತ್ತು ಶಿಕ್ಷಣದ ಉಳಿವಿಗಾಗಿ ನಡೆಯುತ್ತಿರುವ ಬೃಹತ್‌ ಅಕ್ಷರ ಕ್ರಾಂತಿಯಾಗಿ ಮಾರ್ಪಟ್ಟಿದೆ. ಕನ್ನಡಿಗರ ಈ ಎಚ್ಚರಿಕೆಯ ನಡೆ ಮುಂದಿನ ದಿನಗಳಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆಯನ್ನು ತರುವ ಮುನ್ಸೂಚನೆ ನೀಡುತ್ತಿದೆ.

Leave a Reply

Your email address will not be published. Required fields are marked *