ಸುಳ್ಯದಲ್ಲಿ ಎಸ್ ವೈ ಎಸ್ ವತಿಯಿಂದ ಖುತಬಾ ಸಂಗಮ ಹಾಗೂ ಜಮಾಅತ್ ಪ್ರತಿನಿಧಿ ಸಂಗಮ
ಸುನ್ನೀ ಯುವಜನ ಸಂಘ ರಾಜ್ಯ ಸಮಿತಿಯ ನಿರ್ದೇಶನದಂತೆ ಸುಳ್ಯ ಝೋನ್ ಸಮಿತಿಯ ವತಿಯಿಂದ ಮಾದರಿ ಮದುವೆ ಎಂಬ ವಿಷಯದಲ್ಲಿ ಖುತಬಾ ಸಂಗಮ ಹಾಗೂ ಜಮಾಅತ್ ಪ್ರತಿನಿಧಿಗಳ ಸಂಗಮ ವನ್ನು ಹರ್ಲಡ್ಕ ವಿಲ್ಲಾ ದಲ್ಲಿ ಝೋನ್ ಅಧ್ಯಕ್ಷರಾದ ಅಬ್ದುಲ್ಲತೀಫ್ ಜೌಹರಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಾಸ್ತಾವಿಕವಾಗಿ SჄS ಜಿಲ್ಲಾಧ್ಯಕ್ಷರಾದ ಅಶ್ರಫ್ ಸಖಾಫಿ ಮಾಡಾವು ಮಾತನಾಡಿ ಮಾದರಿ ಮದುವೆ ಎಂಬ ವಿಷಯದಲ್ಲಿ ರಾಜ್ಯ ಸಮಿತಿ ಹಮ್ಮಿಕೊಂಡ ಶತದಿನ ಅಭಿಯಾನದ ಬಗ್ಗೆ ವಿವರಿಸಿ ಮದುವೆಯ ಹೆಸರಿನಲ್ಲಿ ನಡೆಸುವ ದುಂದುವೆಚ್ಚಗಳು ಹಾಗೂ ಅನಾಚಾರಗಳ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಮಾದರಿ ಮದುವೆಯನ್ನು ನಡೆಸಲು ಪ್ರತೀ ಮೊಹಲ್ಲಾಗಳ ನಾಯಕರೂ ಮುಂದೆ ಬರಬೇಕೆಂದು ಕರೆ ನೀಡಿದರು. ಮುಖ್ಯ ತರಬೇತುದಾರರಾದ ಬದ್ರುಸ್ಸಾದಾತ್ ಸಯ್ಯಿದ್ ಖಲೀಲುಲ್ ಬುಖಾರಿ ತಂಙಳ್ ರವರು ಮಾತನಾಡಿ ಮಾದರಿ ಮದುವೆ ಎಂಬ ಸುನ್ನೀ ಯುವಜನ ಸಂಘ ನಡೆಸುತ್ತಿರುವ ಈ ಅಭಿಯಾನದೊಂದಿಗೆ ಎಲ್ಲರೂ ಕೈಜೋಡಿಸಿ ವೈವಿಧ್ಯಮಯ ರೂಪದಲ್ಲಿ ಇದರ ಜಾಗೃತಿ ಯನ್ನು ಜನರಲ್ಲಿ ಮೂಡಿಸಬೇಕು. ನಡೆಸಲು ಪ್ರಯತ್ನಪಟ್ಟರೆ ನಡೆಯದ ಯಾವುದೇ ವಿಷಯಗಳು ಇಲ್ಲ. ಮೊದಲು ಜಮಾಅತ್ ನೇತೃತ್ವದಲ್ಲಿರುವವರು ಮಾದರಿ ಆಗಿ ತೋರಿಸಬೇಕು. ಅದಕ್ಕೆ ಹಲವು ಉದಾಹರಣೆಗಳನ್ನು ಸೂಚಿಸುತ್ತಾ ವಿವರಿಸಿದರು.
ಕಾರ್ಯಕ್ರಮದಲ್ಲಿ ಗಾಂಧಿನಗರ ಖತೀಬ್ ಅಶ್ರಫ್ ಕಾಮಿಲ್ ಸಖಾಫಿ, ಮೊಗರ್ಪಣೆ ಮುದರ್ರಿಸ್ ಅಬ್ದುಲ್ ಖಾದರ್ ಸಖಾಫಿ ಮುದುಗುಡ, ಅನ್ಸಾರಿಯಾ ಮುದರ್ರಿಸ್ ಅಬೂಬಕ್ಕರ್ ಹಿಮಮಿ ಸಖಾಫಿ, ಸುಳ್ಯ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಮುಹಮ್ಮದ್ ಕುಂಞಿ ಗೂನಡ್ಕ, ಕರ್ನಾಟಕ ಮುಸ್ಲಿಂ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಬೀಜಕೊಚ್ಚಿ, ಎಸ್ ಎಂ ಎ ಸುಳ್ಯ ರೀಜನಲ್ ಅಧ್ಯಕ್ಷರಾದ ಅಬ್ದುಲ್ ಹಮೀದ್ ಸುಣ್ಣಮೂಲೆ, ಯುವ ಉದ್ಯಮಿ ಹಾಗೂ ಸಂಘಟನಾ ನಾಯಕರೂ ಆದ ಅಬ್ದುಲ್ಲತೀಫ್ ಹರ್ಲಡ್ಕ ಹಾಗೂ ಝೋನ್ ವ್ಯಾಪ್ತಿಯ ಹಲವು ಮೊಹಲ್ಲಾಗಳ ಖತೀಬರುಗಳು ಮತ್ತು ಮೊಹಲ್ಲಾ ಸಮಿತಿ ಪ್ರತಿನಿಧಿಗಳು ಹಾಗೂ ಸುನ್ನೀ ಯುವಜನ ಸಂಘ ಸುಳ್ಯ ಝೋನ್ ನಾಯಕರು ಭಾಗವಹಿಸಿದರು. ಸುನ್ನೀ ಯುವಜನ ಸಂಘ ಸುಳ್ಯ ಝೋನ್ ಪ್ರಧಾನ ಕಾರ್ಯದರ್ಶಿ ಸಿದ್ದೀಖ್ ಗೂನಡ್ಕ ಸ್ವಾಗತಿಸಿ ವಂದಿಸಿದರು.



