ಚೇಸ್ ಮಾಸ್ಟರ್ ವಿರಾಟ್ ಕೊಹ್ಲಿ ಶತಕದ ಹೋರಾಟ, ಕೊನೆಯಲ್ಲಿ ಹರ್ಷಿತ್ ರಾಣಾ ಸ್ಫೋಟಕ ಫಿಫ್ಟಿ ಹೋರಾಟ ಕೊನೇ ಕ್ಷಣದಲ್ಲಿ ವಿಫಲವಾಗಿದೆ. ಹೋಳ್ಕರ್ ಸ್ಟೇಡಿಯಂನಲ್ಲಿಂದು ನಡೆದ 3ನೇ ಏಕದಿನ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ 41 ರನ್ಗಳ ವಿರೋಚಿತ ಸೋಲು ಕಂಡಿದೆ. 3ನೇ ಏಕದಿನ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದ ನ್ಯೂಜಿಲೆಂಡ್ ಫಸ್ಟ್ ಟೈಮ್ ಭಾರತದ ನೆಲದಲ್ಲಿ ಏಕದಿನ ಸರಣಿ ಗೆದ್ದ ಸಾಧನೆ ಮಾಡಿದೆ. 2024ರಲ್ಲಿ ಟೀಂ ಇಂಡಿಯಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿ ಕ್ಲೀನ್ಸ್ವೀಪ್ ಮಾಡಿದ್ದ ಕಿವೀಸ್ ಈಗ ಏಕದಿನ ಸರಣಿ ಗೆದ್ದು ಇತಿಹಾಸ ನಿರ್ಮಿಸಿದೆ.

ಟರ್ನಿಂಗ್ ಸಿಕ್ಕಿದ್ದೆಲ್ಲಿ?
ಸಂಕಷ್ಟದಲ್ಲಿ ಸಿಲುಕಿದ್ದ ಟೀಂ ಇಂಡಿಯಾಕ್ಕೆ ಕಿಂಗ್ ಕೊಹ್ಲಿ ಹಾಗೂ ಹರ್ಷಿತ್ ರಾಣಾ ಉತ್ತಮ ಜೊತೆಯಾಟ ನೀಡಿದ್ದರು. ಕೊನೇ ಕ್ಷಣದಲ್ಲಿ ಹರ್ಷಿತ್ ರಾಣಾ ಅವರ ಅಬ್ಬರದ ಫಿಫ್ಟಿ ಗೆಲುವು ತಂದುಕೊಡುವ ನಿರೀಕ್ಷೆ ಹುಟ್ಟಿಸಿತ್ತು. ಅಷ್ಟರಲ್ಲೇ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿಕೊಂಡರು. ಆದ್ರೆ ಕೊಹ್ಲಿ ಕ್ರೀಸ್ನಲ್ಲಿರುವ ಹೊತ್ತು ಗೆಲುವು ಭಾರತದ್ದೇ ಎಂದು ಫ್ಯಾನ್ಸ್ ಕಾತುರದಿಂದ ಕಾಯ್ತಿದ್ದರು. ಆದ್ರೆ 27 ಎಸೆತಗಳಲ್ಲಿ 46 ರನ್ಗಳ ಅಗತ್ಯವಿದ್ದಾಗಲೇ ಸಿಕ್ಸರ್ ಸಿಡಿಸಲು ಯತ್ನಿಸಿ ಕೊಹ್ಲಿ ಕ್ಯಾಚ್ ಕೊಟ್ಟರು. ಅಷ್ಟರಲ್ಲಾಗಲೇ ಟೀಂ ಇಂಡಿಯಾ 9 ವಿಕೆಟ್ ಕಳೆದುಕೊಂಡಿತ್ತು. ಕೊಹ್ಲಿ ವಿಕೆಟ್ನೊಂದಿಗೆ ಟೀಂ ಇಂಡಿಯಾ ಗೆಲುವು ಕಸಿಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ 8 ವಿಕೆಟ್ ನಷ್ಟಕ್ಕೆ 337 ರನ್ ಬಾರಿಸಿತ್ತು. ಈ ಗುರಿ ಬೆನ್ನಟ್ಟಿದ ಭಾರತ 46 ಓವರ್ಗಳಲ್ಲಿ 296 ರನ್ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಸರಣಿಯನ್ನೂ ಕಳೆದುಕೊಂಡಿತು. ನ್ಯೂಜಿಲೆಂಡ್ ತಂಡದಿಂದ ಮೊದಲಿಗೆ ಬ್ಯಾಟ್ ಬೀಸಿದ ಇಬ್ಬರು ಬ್ಯಾಟರ್ಗಳು ಕೇವಲ 5 ರನ್ ಗಳಿಸಿ ಪೆವಿಲಿಯನ್ ಸೇರಿದರು. ಮೂರನೇ ವಿಕೆಟ್ಗೆ ಜೊತೆಯಾದ ವಿಲ್ ಯಂಗ್ ಹಾಗೂ ಡೇರಿಲ್ ಮಿಚೆಲ್ 53 ರನ್ಗಳ ಜೊತೆಯಾಟ ಆಡಿ ತಂಡದ ಮೊತ್ತವನ್ನು ಹೆಚ್ಚಿಸಿದರು. ಬಳಿಕ ಮಿಚೆಲ್ ಹಾಗೂ ಗ್ಲೆನ್ ಫಿಲಿಪ್ಸ್ 219 ರನ್ಗಳ ಬೃಹತ್ ಜೊತೆಯಾಟ ಆಡಿದರು. ಸರಣಿಯುದ್ಧಕ್ಕೂ ಉತ್ತಮ ಬ್ಯಾಟಿಂಗ್ ಮಾಡಿದ ಮಿಚೆಲ್ 131 ಎಸೆತಗಳಲ್ಲಿ 15 ಬೌಂಡರಿ ಹಾಗೂ 3 ಸಿಕ್ಸರ್ ಬಾರಿಸಿ 137 ರನ್ ಸಿಡಿಸಿದರು. ಗ್ಲೆನ್ ಫಿಲಿಪ್ಸ್ 88 ಎಸೆತಗಳಲ್ಲಿ 9 ಫೋರ್ ಹಾಗೂ 3 ಸಿಕ್ಸರ್ ನೆರವಿನಿಂದ 106 ರನ್ ಕಲೆಹಾಕಿದರು. ಕೊನೆಯಲ್ಲಿ ನಾಯಕ ಮೈಕೆಲ್ ಬ್ರೇಸ್ವೆಲ್ 28 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 337ಕ್ಕೆ ತಲುಪಿಸಿದರು. ಭಾರತದ ಪರ ಅರ್ಷದೀಪ್ ಸಿಂಗ್ ಹಾಗೂ ಹರ್ಷಿತ್ ರಾಣ 3 ವಿಕೆಟ್ ಪಡೆದುಕೊಂಡರು. ಮೊಹಮ್ಮದ್ ಸಿರಾಜ್ ಹಾಗೂ ಕುಲದೀಪ್ ಯಾದವ್ ತಲಾ ಒಂದೊಂದು ವಿಕೆಟ್ ಕಿತ್ತರು. ಭಾರತದ ಪರ ಮೊದಲು ಬ್ಯಾಟ್ ಬೀಸಿದ ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ 28 ರನ್ಗಳ ಜೊತೆಯಾಟವಾಡಿದರು. ರೋಹಿತ್ ಶರ್ಮಾ 13 ಎಸೆತಗಳಿಗೆ 11 ರನ್ ಗಳಿಸಿ ಔಟಾದರು. ಶುಭಮನ್ ಗಿಲ್ 18 ಬಾಲ್ಗೆ 23 ರನ್ ಗಳಿಸಿ ಪೆವಿಲಿಯನ್ ಸೇರಿದರು. ಬಳಿಕ ಬಂದ ಶ್ರೇಯಸ್ ಅಯ್ಯರ್ 3 ರನ್, ಕೆಎಲ್ ರಾಹುಲ್ ಕೇವಲ 1 ರನ್, ನಿತೀಶ್ ಕುಮಾರ್ ರೆಡ್ಡಿ 53 ರನ್, ರವೀಂದ್ರ ಜಡೆಜ 12 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ ಹಾಗೂ ನಿತೀಶ್ ರೆಡ್ಡಿ ಜೊತೆಯಾಟದಲ್ಲಿ 88 ರನ್ ಕಲೆಹಾಕಿದರು. ಬಳಿಕ ಕೊಹ್ಲಿ ಹಾಗೂ ಹರ್ಷಿತ್ ರಾಣ ಜೊತೆಯಾಟವಾಡಿ 69 ಎಸೆತಗಳಿಗೆ 99 ರನ್ ಗಳಿಸಿ ತಂಡದ ಮೊತ್ತವನ್ನು ಏರಿಸಿದರು. ಹರ್ಷಿತ್ ರಾಣ 43 ಎಸೆತಗಳಿಗೆ 52 ರನ್ ಗಳಿಸಿ ಔಟಾದರು. ವಿರಾಟ್ ಕೊಹ್ಲಿ 108 ಎಸೆತಗಳಿಗೆ 124 ರನ್ ಕಲೆಹಾಕಿ ಪೆವಿಲಿಯನ್ಗೆ ಮರಳಿದರು. ಮೊಹಮ್ಮದ್ ಸಿರಾಜ್ ಯಾವುದೇ ರನ್ ಗಳಿಸದೇ ಔಟಾದರೆ, ಕುಲದೀಪ್ ಯಾದವ್ 5 ರನ್ ಗಳಿಸಿ ಔಟಾದರು. ಅರ್ಷದೀಪ್ ಸಿಂಗ್ 4 ರನ್ ಗಳಿಸಿ ಕೊನೆಯವರೆಗೆ ಅಜೇಯರಾಗಿ ಉಳಿದರು.
