ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ.) ಸುಳ್ಯ ಇದರ ಮಾತೃ ಸಂಸ್ಥೆಯಾದ ನೆಹರು ಮೆಮೋರಿಯಲ್ ಕಾಲೇಜು ಸುವರ್ಣ ಸಂಭ್ರಮದ ಹೊಸ್ತಿಲಲ್ಲಿದ್ದು, 2024–25ನೇ ಶೈಕ್ಷಣಿಕ ವರ್ಷದ ಮಂಗಳೂರು ವಿಶ್ವವಿದ್ಯಾಲಯದ ಪದವಿ ವಿಭಾಗಗಳ ರ್ಯಾಂಕ್ ಪಟ್ಟಿ ಪ್ರಕಟಗೊಂಡಿದೆ. ಈ ಪಟ್ಟಿಯಲ್ಲಿ ಕಾಲೇಜು ಮೂರು ಪ್ರತಿಷ್ಠಿತ ರ್ಯಾಂಕ್‌ಗಳನ್ನು ತನ್ನದಾಗಿಸಿಕೊಂಡು ಮತ್ತೊಮ್ಮೆ ಕೀರ್ತಿ ಪತಾಕೆ ಹಾರಿಸಿದೆ.
ಕಳೆದ ಹಲವು ವರ್ಷಗಳಿಂದ ರ್ಯಾಂಕ್ ವಿಜೇತರ ಪಟ್ಟಿಯಲ್ಲಿ ಸ್ಥಾನ ಪಡೆಯುತ್ತಾ ಬಂದಿರುವ ಎನ್‌ಎಂಸಿ, ಈ ವರ್ಷವೂ ತನ್ನ ಶೈಕ್ಷಣಿಕ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಸಮಾಜಕಾರ್ಯ ವಿಭಾಗದ ವಿದ್ಯಾರ್ಥಿನಿ ಜ್ಯೋತಿ ಬಿ.ಎಚ್. ಪ್ರಥಮ ರ್ಯಾಂಕ್ ಪಡೆದು ಕಾಲೇಜಿಗೆ ಹೆಮ್ಮೆ ತಂದಿದ್ದಾರೆ. ಇವರು ಅರಂತೋಡು ಗ್ರಾಮದ ಬೆದ್ರುಪಣೆ ಹರೀಶ್ ಹಾಗೂ ರುಕ್ಮಿಣಿ ದಂಪತಿಗಳ ಪುತ್ರಿ.
ವಿಜ್ಞಾನ ವಿಭಾಗದಲ್ಲಿ ಸೌಮ್ಯ ಎಸ್. ದ್ವಿತೀಯ ರ್ಯಾಂಕ್ ಗಳಿಸಿದ್ದಾರೆ. ಇವರು ಶ್ರೀ ಚೆನ್ನಕೇಶವ ದೇವಸ್ಥಾನದ ಅರ್ಚಕರಾದ ಶ್ರೀರಾಮ ಯು.ವಿ. ಮತ್ತು ಸುಜಾತ ವಿ. ಅವರ ಪುತ್ರಿ. ಅದೇ ವಿಭಾಗದ ರಕ್ಷಿತ ಕೆ. ಎಂಟನೇ ರ್ಯಾಂಕ್ ಪಡೆದು ಕಾಲೇಜಿನ ಸಾಧನೆಗೆ ಮತ್ತೊಂದು ಮೆರುಗು ತಂದಿದ್ದಾರೆ. ಇವರು ಉಬರಡ್ಕ ಮಿತ್ತೂರು ಗ್ರಾಮದ ಉದಯರವಿ ಕೆ. ಮತ್ತು ರೇಖಾ ದಂಪತಿಗಳ ಪುತ್ರಿ.
ಈ ಸಾಧನೆಗೆ ಕಾರಣರಾದ ವಿದ್ಯಾರ್ಥಿನಿಯರನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಬೋಧಕ-ಬೋಧಕೇತರ ವೃಂದದವರು ಹೃತ್ಪೂರ್ವಕವಾಗಿ ಅಭಿನಂದಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಶ್ರೇಷ್ಠ ಸಾಧನೆಗಳನ್ನು ಮಾಡುವಂತೆ ಹಾರೈಸಿದ್ದಾರೆ.
ಸುವರ್ಣ ಸಂಭ್ರಮದ ಮಧ್ಯೆ ದೊರೆತ ಈ ತ್ರಿವಳಿ ರ್ಯಾಂಕ್‌ಗಳು ನೆಹರು ಮೆಮೋರಿಯಲ್ ಕಾಲೇಜಿನ ಶೈಕ್ಷಣಿಕ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಪರಿಶ್ರಮಕ್ಕೆ ದೊರೆತ ಗೌರವವೆಂದು ಕಾಲೇಜು ವಲಯದಲ್ಲಿ ಹರ್ಷ ವ್ಯಕ್ತವಾಗಿದೆ.




