ಕರ್ನಾಟಕ ಕ್ರೀಡಾ ಪ್ರಾಧಿಕಾರದಡಿ ‘ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್’ ರಚಿಸಿ ರಾಜ್ಯ ಸರ್ಕಾರ ಅಧಿಕೃತ ಮಾನ್ಯತೆ ನೀಡಿದೆ. ಈ ಮೂಲಕ ಕರಾವಳಿಯ ಜಾನಪದ ಕ್ರೀಡೆ ಕಂಬಳಕ್ಕೆ ರಾಜ್ಯದ ಅಧಿಕೃತ ಮಾನ್ಯತೆ ಹಾಗೂ ಪ್ರೋತ್ಸಾಹ ದೊರೆತಂತಾಗಿದೆ.ರಾಜ್ಯ ಕಂಬಳ ಅಸೋಸಿಯೇಷನ್ಗೆ ಮೂರು ವರ್ಷದ ಅವಧಿ ಅಥವಾ ಮುಂದಿನ ಆದೇಶದವರೆಗೆ ಮಾನ್ಯತೆ ನೀಡಲಾಗಿದೆ.
ಅಸೋಸಿಯೇಷನ್ ಪ್ರತಿವರ್ಷ ಜೂ.30ರೊಳಗೆ ಕಾರ್ಯಚಟುವಟಿಕೆಗಳ ಆಡಳಿತ ವರದಿ, ವಾರ್ಷಿಕ ವಹಿವಾಟುವಿನ ಆಡಿಟ್ ವರದಿ, ವಾರ್ಷಿಕ ಸಾಮಾನ್ಯ ಸಮಿತಿ ಮತ್ತು ಕಾರ್ಯಕಾರಿ ಸಮಿತಿ ಸಭೆಗಳ ನಡವಳಿ ಪ್ರತಿ, ಕ್ಯಾಲೆಂಡರ್ ಆಫ್ ಇವೆಂಟ್, ಸಂಘಗಳ ನೋಂದಣಿ ಕಾಯಿದೆ 1960ರಡಿ ಸಕ್ಷಮ ಪ್ರಾಧಿಕಾರದಿಂದ ರಾಜ್ಯ ಕಂಬಳ ಅಸೋಸಿಯೇಷನ್ ನವೀಕರಿಸಿರುವ ಪ್ರತಿ ಒದಗಿಸಲು ಆದೇಶದಲ್ಲಿ ತಿಳಿಸಲಾಗಿದೆ.
ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ನೇತೃತ್ವದಲ್ಲಿ ಅ.15ರಂದು ಮೊದಲ ಸಭೆ ಬೆಂಗಳೂರಿನಲ್ಲಿ ನಡೆಯಲಿದೆ. ಈ ಸಭೆಯಲ್ಲಿ ಕಂಬಳ ಅಸೋಸಿಯೇಷನ್ನ ಬೈಲಾದ ಕರಡು ಪ್ರತಿ ಅನುಮೋದನೆ ಸಿಗಲಿದೆ.
ರಾಜ್ಯ ಕಂಬಳ ಅಸೋಸಿಯೇಷನ್ ಪ್ರಥಮ ಅಧ್ಯಕ್ಷರಾಗಿ ಬೆಳಪು ದೇವಿಪ್ರಸಾದ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ. ಉಪಾಧ್ಯಕ್ಷರಾಗಿ ನವೀನ್ಚಂದ್ರ ಆಳ್ವ ತಿರುವೈಲುಗುತ್ತು ವಾಮಂಜೂರು, ಕಾರ್ಯದರ್ಶಿಯಾಗಿ ವಿಜಯ ಕುಮಾರ್ ಕಂಗಿನಮನೆ ಕಾರ್ಕಳ, ಕೋಶಾಧಿಕಾರಿಯಾಗಿ ಲೋಕೇಶ್ ಶೆಟ್ಟಿ ಮುಚ್ಚೂರು ನೇಮಕವಾಗಿದ್ದಾರೆ.




Source: Suvarna news