ಬೆಂಗಳೂರು: ರಾಜ್ಯದಲ್ಲಿ ಹಗಲಿರುಳು ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ಮುಂದೆ ಪೊಲೀಸ್ ಸಿಬ್ಬಂದಿಗಳ ಹುಟ್ಟುಹಬ್ಬ ಹಾಗೂ ವಿವಾಹ ವಾರ್ಷಿಕೋತ್ಸವದ ದಿನದಂದು ಕಡ್ಡಾಯ ರಜೆ ನೀಡುವಂತೆ ಸರ್ಕಾರ ಸೂಚನೆ ನೀಡಿದೆ.

​ಈ ಕುರಿತು ರಾಜ್ಯ ಒಳಾಡಳಿತ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಯವರು, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಆರಕ್ಷಕ ಮಹಾನಿರೀಕ್ಷಕರಿಗೆ (DG & IGP) ಪತ್ರ ಬರೆದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದಾರೆ.

ಹಿನ್ನೆಲೆ ಏನು?

ಕರ್ನಾಟಕ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರದ ನಾಗರಿಕ ಸಮಾಜದ ಸದಸ್ಯರಾದ ಮೋಹನ್ ಕುಮಾರ್ ದಾನಪ್ಪ ಅವರು ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದರು. ಪೊಲೀಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್‌ನಿಂದ ಹಿಡಿದು ಎಎಸ್‌ಐ (ASI) ದರ್ಜೆಯವರೆಗಿನ ಸಿಬ್ಬಂದಿಗಳು ತೀವ್ರ ಒತ್ತಡದ ನಡುವೆ ಕೆಲಸ ಮಾಡುತ್ತಿರುತ್ತಾರೆ. ಆದ್ದರಿಂದ, ಅವರ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವದ ದಿನದಂದು ಕುಟುಂಬದೊಂದಿಗೆ ಸಮಯ ಕಳೆಯಲು ಕಡ್ಡಾಯ ರಜೆ ನೀಡುವಂತೆ ಅವರು ಮನವಿ ಮಾಡಿದ್ದರು.

ಈ ಮನವಿಯನ್ನು ಪರಿಗಣಿಸಿರುವ ಸರ್ಕಾರ, ನಿಯಮಾನುಸಾರ ಮುಂದಿನ ಕ್ರಮ ವಹಿಸುವಂತೆ ಪೊಲೀಸ್ ಇಲಾಖೆಯ ಮುಖ್ಯಸ್ಥರಿಗೆ ಸೂಚಿಸಿದೆ. ಈ ನಿರ್ಧಾರದಿಂದಾಗಿ ಕುಟುಂಬದಿಂದ ದೂರವಿದ್ದು ಕರ್ತವ್ಯ ನಿರ್ವಹಿಸುವ ಸಾವಿರಾರು ಪೊಲೀಸ್ ಸಿಬ್ಬಂದಿಗೆ ನೆಮ್ಮದಿ ಸಿಗುವಂತಾಗಿದೆ.

Leave a Reply

Your email address will not be published. Required fields are marked *