ತಮಿಳಿನ ಜನಪ್ರಿಯ ಹಾಸ್ಯ ನಟ ಮದನ್ ಬಾಬ್ ಅವರು ಶನಿವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಅಡ್ಯಾರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಹತ್ತಿರ ಮೂಲಗಳು ತಿಳಿಸಿವೆ.ಮದನ್ ಬಾಬ್ ಎಂದೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಎಸ್.ಕೃಷ್ಣಮೂರ್ತಿ ಅವರು ಕಮಲ್ ಹಾಸನ್, ರಜನಿಕಾಂತ್, ಅಜಿತ್, ಸೂರ್ಯ ಮತ್ತು ವಿಜಯ್ ಅವರಂತಹ ಪ್ರಮುಖ ನಟರೊಂದಿಗೆ ಪರದೆ ಹಂಚಿಕೊಂಡಿದ್ದರು.
ಸನ್ ಟಿವಿಯಲ್ಲಿ ಪ್ರಸಾರವಾದ ‘ಅಸಥ ಪೋವತು ಯಾರು?’ ಜನಪ್ರಿಯ ಹಾಸ್ಯ ಕಾರ್ಯಕ್ರಮದ ತೀರ್ಪುಗಾರರಲ್ಲಿ ಒಬ್ಬರಾಗಿ ಬಾಬ್ ಕಾಣಿಸಿಕೊಂಡಿದ್ದರು.
‘ತೆನಾಲಿ’ ಚಿತ್ರದಲ್ಲಿನ ಡೈಮಂಡ್ ಬಾಬು, ‘ಫ್ರೆಂಡ್ಸ್’ ಚಿತ್ರದಲ್ಲಿನ ಮ್ಯಾನೇಜರ್ ಸುಂದರೇಶನ್ ಪಾತ್ರಗಳು ಜನ ಮೆಚ್ಚುಗೆಗೆ ಪಾತ್ರವಾಗಿದ್ದವು.
ಬಾಬ್ ಅವರ ಸಾವಿಗೆ ನಟ, ನೃತ್ಯ ನಿರ್ದೇಶಕ ಪ್ರಭುದೇವ ಸಂತಾಪ ವ್ಯಕ್ತಪಡಿಸಿದ್ದಾರೆ. ‘ದಯೆ, ನಗು, ಹಾಸ್ಯ ಗುಣಗಳಿಂದ ಸೆಟ್‌ನಲ್ಲಿದ್ದ ಎಲ್ಲರನ್ನು ನಗಿಸುತ್ತಿದ್ದರು’ ಎಂದು ನೆನಪಿಸಿಕೊಂಡಿದ್ದಾರೆ.