ಪುತ್ತೂರು: ಮಹೀಂದ್ರ ಥಾರ್ ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿದ್ದ ಜಾಲವನ್ನು ಸಂಪ್ಯ (ಪುತ್ತೂರು ಗ್ರಾಮಾಂತರ) ಪೊಲೀಸರು ಭೇದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಕೇರಳ ಮೂಲದ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 55 ಗ್ರಾಂ ಎಂಡಿಎಂಎ ಹಾಗೂ ಒಂದು ತಲವಾರನ್ನು ವಶಪಡಿಸಿಕೊಳ್ಳಲಾಗಿದೆ. ಈ ಘಟನೆ ಫೆಬ್ರವರಿ 18ರಂದು ನಡೆದಿದೆ.

ಬಂಧಿತ ಆರೋಪಿಗಳು:
ಬಂಧಿತರನ್ನು ಕೇರಳದ ಕೋಝಿಕೋಡ್ ಪೆರುವಾಯಲ್ನ ಮುಹಮ್ಮದ್ ಅಜ್ಮಲ್ ಸಿ (30), ವಯನಾಡ್ ನಿವಾಸಿ ಇಸ್ಮಾಯಿಲ್ (28) ಮತ್ತು ಕೋಝಿಕೋಡ್ ಕೊಯಿಲಾಂಡಿ ನಿವಾಸಿ ಸಂಶೀರ್ (27) ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಎಸ್.ಐ ಗುಣಪಾಲ ಜಿ. ಅವರು ಸಿಬ್ಬಂದಿಗಳೊಂದಿಗೆ ಗಸ್ತು ತಿರುಗುತ್ತಿದ್ದ ವೇಳೆ, ಖಚಿತ ಮಾಹಿತಿ ಮೇರೆಗೆ ಒಳಮೊಗ್ರು ಗ್ರಾಮದ ಪಪ್ಪೆಮಜ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಪುತ್ತೂರು ಕಡೆಯಿಂದ ಬಂದ ಕಪ್ಪು ಬಣ್ಣದ ಕೆ.ಎಲ್. (KL) ನೋಂದಾವಣೆಯ ಮಹೀಂದ್ರ ಥಾರ್ ಕಾರನ್ನು ಪೊಲೀಸರು ತಡೆದು ನಿಲ್ಲಿಸಿದ್ದಾರೆ.
ಕಾರು ನಿಲ್ಲಿಸುತ್ತಿದ್ದಂತೆ ಚಾಲಕ ಸೇರಿ ಅದರಲ್ಲಿದ್ದ ಮೂವರು ಇಳಿದು ಓಡಿಹೋಗಲು ಯತ್ನಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಸಿಬ್ಬಂದಿಗಳ ನೆರವಿನೊಂದಿಗೆ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಆರೋಪಿಗಳ ಪೈಕಿ ಮುಹಮ್ಮದ್ ಅಜ್ಮಲ್ ಪೊಲೀಸರಿಂದ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿ ವಿಫಲನಾಗಿದ್ದಾನೆ.
ರಕ್ಷಣೆಗಾಗಿ ಇಟ್ಟುಕೊಂಡಿದ್ದ ತಲವಾರು ಪತ್ತೆ:
ಆರೋಪಿಗಳನ್ನು ತೀವ್ರ ವಿಚಾರಣೆಗೊಳಪಡಿಸಿದಾಗ ತಾವು ಎಂಡಿಎಂಎ ಮಾರಾಟಕ್ಕೆ ತೆರಳುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸರು ಕಾರನ್ನು ತಪಾಸಣೆ ನಡೆಸಿದಾಗ ಚಾಲಕನ ಸೀಟಿನ ಅಡಿಯಲ್ಲಿ ಒಂದು ತಲವಾರು ಪತ್ತೆಯಾಗಿದೆ. ಈ ಬಗ್ಗೆ ಕಾರು ಚಾಲಕ ಇಸ್ಮಾಯಿಲ್ನನ್ನು ಪ್ರಶ್ನಿಸಿದಾಗ, ಎಂಡಿಎಂಎ ಮಾರಾಟ ಮಾಡುವಾಗ ತಮ್ಮ ರಕ್ಷಣೆಗಾಗಿ ತಲವಾರನ್ನು ಇಟ್ಟುಕೊಂಡಿರುವುದಾಗಿ ಬಾಯ್ಬಿಟ್ಟಿದ್ದಾನೆ.
ನಿಷೇಧಿತ ಮಾದಕ ವಸ್ತು ಎಂಡಿಎಂಎ ಮತ್ತು ಮಾರಕಾಸ್ತ್ರವನ್ನು ಹೊಂದಿದ್ದ ಆರೋಪಿಗಳ ವಿರುದ್ಧ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 8C, 22(C), 29 NDPS Act 1985 ಹಾಗೂ 25(1B)(B) Arms Act ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.




