Nammasullia: IPL ಸೀಸನ್-18ರ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಲಿಗೆ ಜೂನ್ 4 ಎಂಬುದು ‘ಕಪ್’ಚುಕ್ಕೆ. ಬೆಂಗಳೂರಿನಲ್ಲಿ ನಡೆದ  RCB ಕಪ್ ಗೆದ್ದ ಸಂಭ್ರಮಾಚರಣೆ ವೇಳೆ ಉಂಟಾದ ಕಾಲ್ತುಳಿತದಿಂದಾಗಿ 11 ಮಂದಿ ಅಭಿಮಾನಿಗಳು ಅಸುನೀಗಿದ್ದರು. ಈ ದುರ್ಘಟನೆಯ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಯಾವುದೇ ಪೋಸ್ಟ್ ಹಂಚಿಕೊಂಡಿರಲಿಲ್ಲ.

ಇದೀಗ ಬರೋಬ್ಬರಿ 84 ದಿನಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪೋಸ್ಟ್ ಒಂದು ಕಾಣಿಸಿಕೊಂಡಿದೆ. ಅದು ಸಹ ಅಭಿಮಾನಿಗಳಿಗಾಗಿ ಹೊಸ ಭರವಸೆಯನ್ನು ನೀಡುವ ಮೂಲಕ ಎಂಬುದು ವಿಶೇಷ.

ಆರ್ಸಿಬಿ ಪೋಸ್ಟ್ ಸಾರಾಂಶ ಹೀಗಿದೆ:

ನಾವು ಪೋಸ್ಟ್ ಮಾಡಿ ಸುಮಾರು ಮೂರು ತಿಂಗಳಕಾಲ ಕಳೆದಿದೆ. ನಮ್ಮ ಮೌನ, ಖಾಲಿತನದಿಂದಷ್ಟೇ ಅಲ್ಲ, ದುಃಖದಿಂದ ತುಂಬಿದ ತೀವ್ರವಾದ ಮೌನ. ಈ ಮಾಧ್ಯಮದ ಮುಖಾಂತರ ನೀವೆಲ್ಲಾ ಸಂತೋಷದಿಂದ ಸಂಭ್ರಮಿಸುವ ವಿಷಯಗಳನ್ನು ಮತ್ತು ಕ್ಷಣಗಳನ್ನು ಹಂಚಿಕೊಳ್ಳುತ್ತಿದ್ದೆವು.  ಆದರೆ ಜೂನ್ 4ರ ಘಟನೆ ಎಲ್ಲವನ್ನೂ ಬದಲಾಯಿಸಿತು.

ಆ ದಿನ ನಮ್ಮ ಹೃದಯವನ್ನು ಮುರಿಯಿತು. ನಂತರದ ಮೌನವು ಕೇವಲ ನಿಶ್ಯಬ್ದವಲ್ಲ, ಅದು ಶ್ರದ್ಧೆಯಿಂದ ತುಂಬಿದ ಶಾಂತ ಶ್ರದ್ಧಾಂಜಲಿ. ಈ ಮೌನದೊಳಗೆ ನೋವನ್ನು ಅನುಭವಿಸುತ್ತಾ ನಾವು ಆಳವಾಗಿ ಯೋಚಿಸಿದ್ದೆವು ಮತ್ತು ಅನೇಕ ವಿಷಯಗಳನ್ನು ಕಲಿತೆವು.  ನೋವನ್ನೇ ಶ್ರದ್ಧೆಯಾಗಿ, ನಂಬಿಕೆಯಾಗಿ ರೂಪಿಸಬೇಕೆಂದು ತೀರ್ಮಾನಿಸಿದ್ದೆವು.

ಅದರ ಫಲವೇ ಆರ್‌ಸಿಬಿ ಕೇರ್ಸ್. ನಮ್ಮ ಅಭಿಮಾನಿಗಳು ಮತ್ತು ಸಮುದಾಯಕ್ಕಾಗಿ ನಿಷ್ಠೆಯಿಂದ ರೂಪಿಸಿದ ಒಂದು ಯೋಜನೆ.

ಇಂದು ನಾವು ಮರಳಿದ್ದೇವೆ.  ನಿಮ್ಮೊಂದಿಗೆ ನಿಲ್ಲುವ ಭರವಸೆಯನ್ನು ನೀಡುತ್ತಾ, ಕರ್ನಾಟಕದ ಹೆಮ್ಮೆಯಾಗಿ ಮುಂದೆ ಸಾಗುತ್ತೇವೆ. ಇದು ನಮ್ಮ ಕಾಳಜಿ, ನಮ್ಮ ಪ್ರತಿಜ್ಞೆ.

ಆರ್‌ಸಿಬಿ ಕೇರ್ಸ್: ನಾವು ಸದಾ ನಿಮ್ಮೊಂದಿಗಿದ್ದೇವೆ. ಈ ಪೋಸ್ಟ್ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಅಭಿಮಾನಿಗಳಿಗಾಗಿ ವಿಶೇಷ ಕಾಳಜಿವಹಿಸಲು ನಿರ್ಧರಿಸಿದೆ. ಇದಕ್ಕಾಗಿ ಟ್ರಸ್ಟ್​ವೊಂದನ್ನು ರೂಪಿಸುವ ಸಾಧ್ಯತೆಯಿದ್ದು, ಈ ಮೂಲಕ ಕಾಲ್ತುಳಿತದಿಂದ ಮೃತಪಟ್ಟಿರುವ ಅಭಿಮಾನಿಗಳ ಕುಟುಂಬಕ್ಕೆ ನೆರವಾಗುವ ಯೋಜನೆ ರೂಪಿಸಲಾಗಿದೆ ಎಂದು ತಿಳಿದು ಬಂದಿದೆ.

.

Leave a Reply

Your email address will not be published. Required fields are marked *