ಏನಾಗಿದೆ ನಮ್ಮೀ ಸಮಾಜಕ್ಕೆ ?ಎತ್ತ ಸಾಗುತ್ತಿದೆ ನಮ್ಮೀ ಸಮಾಜ? ಹಿಂದೆ ಒಂದು ಕಾಲವಿತ್ತು.ಆ ಕಾಲದಲ್ಲಿ ತಾನು ತನ್ನದೆನ್ನುವುದಕ್ಕಿಂತ ತಾನು ತನ್ನವರು ನಾವೆಲ್ಲರೂ ಎನ್ನುವ ಕಾಲ.ಸ್ವಾರ್ಥ, ಅಸೂಯೆ, ಹೊಟ್ಟೆಕಿಚ್ಚಿಲ್ಲದೆ, ಬೇಧ ಭಾವವಿಲ್ಲದೆ ಬೆರೆತು ಬಾಳುವ ಕಾಲ.ಆದರೆ ಈಗ ಕಾಲ ಸಂಪೂರ್ಣ ಬದಲಾಗಿದೆ ಇಂದು ಸಮಾಜದಲ್ಲಿ ಅಸ್ತಿತ್ವದಲ್ಲಿ ಇರುವುದು ಕೇವಲ ತಾನು ತನ್ನದು ಮಾತ್ರ.
ಮಾನವೀಯ ಮೌಲ್ಯಗಳಿಗೆ ಇಲ್ಲಿ ಜಾಗವಿಲ್ಲ, ಜಾತಿ ಧರ್ಮಗಳ ಕಚ್ಚಾಟವೇ ತುಂಬಿ ಮಾನವತೆಗೆ ಅರ್ಥವೇ ಇಲ್ಲದಂತಾಗಿದೆ ಸಮಾಜದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಕೆಲವು ಘಟನೆಗಳನ್ನು ನೋಡಿದಾಗ ಅನಿಸುವುದುಂಟು ನಾವು ಭೂಮಿಯ ಮೇಲೆ ಇದ್ದೇವೆಯೋ ಅಥವಾ ಬೇರೆಲ್ಲಾದರೂ ? ಎಂದು.ಅನ್ಯಾಯದ ವಿರುದ್ಧ ದನಿ ಎತ್ತುವವರಿಲ್ಲ ಎತ್ತುವವರಿಗೆ ಉಳಿಗಾಲವೂ ಇಲ್ಲ.ಜೊತೆಗೆ ಕುರುಡು ಕಾಂಚಾಣದ ಮಹಿಮೆ ಬೇರೆ.ಹೀಗಾದರೆ ಮುಂದೊಂದು ದಿನ ನಮ್ಮ ಸಮಾಜ ಎಲ್ಲಿಗೆ ಹೋಗಿ ಮುಟ್ಟುವುದೋ ನಾನರಿಯೆ!
ಇಂದಿನ ಸಮಾಜದ ಪರಿಸ್ಥಿತಿ ಎಲ್ಲಿಗೆ ತಲುಪಿದೆ ಎಂದರೆ ಹೆತ್ತ ತಾಯಿಗೆ ತನ್ನ ಮಗುವೇ ಬೇಡವಾಗುವಷ್ಟು,ಸಾಕಿ ಸಲಹಿದ ತಂದೆ ತಾಯಿಯನ್ನು ಆಶ್ರಮಕ್ಕೆ ಸೇರಿಸುವಷ್ಟು,ಸಲ್ಲದ ಪ್ರೀತಿಗಾಗಿ ಹೆತ್ತವರನ್ನೇ ಕೊಂದು ಜೈಲು ಸೇರುವಷ್ಟು.ಕರುಣೆ ಅನುಕಂಪ ಗಳಿಗೆಲ್ಲ ನಮ್ಮ ಇಂದಿನ ಸಮಾಜದಲ್ಲಿ ಜಾಗವಿಲ್ಲ, ಪ್ರಾಣಿಪಕ್ಷಿಗಳ ಮೇಲಂತೂ ದಯೆಯೇ ಇಲ್ಲ.ದಯೆಯೇ ಧರ್ಮದ ಮೂಲವಯ್ಯ ಎಂದು ಸಾರಿದ ಸಮಾಜದಲ್ಲಿ ಇಂದು ದಯೆಗೆ ಜಾಗವೇ ಇಲ್ಲದಾಗಿರುವುದು ದುರಂತವೇ ಸರಿ.ಇಂದು ಸಮಾಜದಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳು ನಿಜವಾಗಿಯೂ ಪ್ರಕೃತಿ ವಿರೋಧ ಅದನ್ನು ಒಪ್ಪಿಕೊಳ್ಳುವುದು ಅಸಾಧ್ಯ ಏಕೆಂದರೆ ಹೆತ್ತ ತಾಯಿ ತಾನು ಹೆತ್ತ ಮಗುವನ್ನು ತಿರಸ್ಕರಿಸುವುದುಂಟೇ? ಅಥವಾ ಹೆತ್ತ ಮಗನೇ ಹೆತ್ತ ತಾಯಿಯನ್ನು ಕೊಲ್ಲುವುದುಂಟೇ? ಇದೆಲ್ಲಾ ಪ್ರಕೃತಿ ವಿರೋಧ ಅಲ್ಲದೆ ಮತ್ತೇನು ಇದನ್ನೆಲ್ಲಾ ನೋಡಿದಾಗ ಅನಿಸುವುದೊಂದೆ ವಿನಾಶ ಕಾಲೇ ವಿಪರೀತ ಬುದ್ಧಿ ಎಂದು.
ಪ್ರಾಪ್ತಿ ಗೌಡ