ನಗರದಲ್ಲಿ ಡ್ರಗ್ಸ್ ಮಾರಾಟ ಎಗ್ಗಿಲ್ಲದೇ ಸಾಗುತ್ತಿದೆ. ಅದರಲ್ಲೂ ವಿದೇಶಿಗರ ಹಾವಳಿ ಮಿತಿಮೀರಿದ್ದು, ವೀಸಾ ಅವಧಿ ಮುಗಿದಿದರೂ ಬೆಂಗಳೂರಲ್ಲಿ ವಾಸಿಸುತ್ತಿದ್ದಾರೆ. ಇದೀಗ ಪೊಲೀಸರು ಒಂದಷ್ಟು ಪೆಡ್ಲರ್ಗಳ ಹೆಡೆಮುರಿ ಕಟ್ಟಿದ್ದಾರೆ. ಜೊತೆಗೆ ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಕೋಟಿ ರೂ. ಡ್ರಗ್ಸ್ ಸೀಜ್ ಮಾಡಿದ್ದಾರೆ. ಆಫ್ರಿಕಾ ಮೂಲದ ಜೊಯಲ್ ಕಾಬೊಂಗ್, ಜೊಯ್ ಸಂಡೇ ಬಂಧಿತ ಪ್ರಜೆಗಳು. ಜೊಯಲ್ ಕಾಬೊಂಗ್ 12 ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದ. ಅದೇ ರೀತಿಯಾಗಿ ಜೊಯ್ ಸಂಡೇ ಸಹ ಮೂರ ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದಳು. ವೀಸಾ ಅವಧಿ ಮುಗಿದಿದರೂ ಬೆಂಗಳೂರಲ್ಲಿ  ವಾಸವಾಗಿದ್ದರು. ಈ ಇಬ್ಬರು ಮತ್ತೊಬ್ಬನಿಂದ ಡ್ರಗ್ಸ್ ಖರೀದಿ ಮಾಡಿ ಮಾರಾಟ ಮಾಡುತ್ತಿದ್ದರು. ಆದರೆ ಆ.15ರ ಸಂಜೆ ಬೆಟ್ಟದಾಮಸಪುರದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸದ್ಯ ಬಂಧಿತರಿಂದ 2.150 ಕೆಜಿ ಎಂಡಿಎಂಎ ವಶಕ್ಕೆ ಪಡೆದು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರು ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಇತ್ತ ಸಿಸಿಬಿ ಪೊಲೀಸರು ಡ್ರಗ್ಸ್​ ಪೆಡ್ಲಿಂಗ್ ಮಾಡುತ್ತಿದ್ದ ಆಫ್ರಿಕನ್ ಮೂಲದ ಜಾನ್ ಡಿಕೊಸ್ಟೋ ಎಂಬಾತನನ್ನ ಬಂಧಿಸಿದ್ದು, 40 ಲಕ್ಷ ರೂ ಮೌಲ್ಯದ 255 ಗ್ರಾಂ. ತೂಕದ ಎಂಡಿಎಂಎ ಕ್ರಿಸ್ಟೆಲ್ ವಶಕ್ಕೆ ಪಡೆಯಲಾಗಿದೆ. ಟೂರಿಸ್ಟ್ ವೀಸಾದಡಿಯಲ್ಲಿ ಬಂದು ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ಜಾನ್, ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ. ಆದರೆ ಪರಿಚಯಸ್ಥರು ಹಾಗೂ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ.

ಇನ್ನು ಸಂಪಿಗೇಹಳ್ಳಿ ಪೊಲೀಸರು, ಹೆಚ್​​ಎಸ್​​ಆರ್​​ ಪೊಲೀಸರು, ಯಲಹಂಕ ಪೊಲೀಸರು ಡ್ರಗ್ಸ್ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನ ಬಂಧಿಸಿದ್ದಾರೆ. ಈ ಬಂಧಿತ ಆರೋಪಿಗಳಿಂದ 31 ಲಕ್ಷ ರೂ ಮೌಲ್ಯದ ಮಾದಕ ವಸ್ತುಗಳನ್ನ ವಶಪಡಿಸಿಕೊಂಡಿದ್ದು, ಆರೋಪಿಗಳನ್ನ ಜೈಲಿಗಟ್ಟಲಾಗಿದೆ.

Leave a Reply

Your email address will not be published. Required fields are marked *