ಮಂಗಳೂರು ಅಗಸ್ಟ್ 20: ಬ್ರ್ಯಾಂಡ್ ಸ್ಪೋರ್ಟ್ ವಸ್ತುಗಳ ನಕಲಿ ಅಥವಾ ಫಸ್ಟ್ ಕಾಫಿಯನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರು ದಾಳಿ ಮಾಡಿ ಪ್ರಕರಣ ದಾಖಲಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮಿಥುನ್ ಎಚ್.ಎನ್ ಉಳ್ಳಾಲ ಠಾಣಾ ವ್ಯಾಪ್ತಿಯ ಸ್ಪೋರ್ಟ್ಸ್ ವಿನ್ನರ್ ಮಳಿಗೆ ಹಾಗೂ ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ ಮಹಾದೇವ್ ಸ್ಪೋರ್ಟ್ಸ್‍ ಸೆಂಟರ್‌ ಮಳಿಗೆಯಲ್ಲಿ ಕೊಸ್ಕೊ ನಿವಿಯ ಮತ್ತು ಯೋನೆಕ್ಸ್ ಬ್ರಾಂಡ್ ಗಳ ಉತ್ಪನ್ನದ ಸೋಗಿನಲ್ಲಿ ಮಾರಾಟ ಮಾಡುತ್ತಿದ್ದ ಸುಮಾರು 300 ಫುಟ್ ಬಾಲ್‍ ವಾಲಿಬಾಲ್ ಹಾಗೂ ಬ್ಯಾಡ್ಮಿಂಟನ್ ರಾಕೆಟ್‍ಗಳಂತಹ ನಕಲಿ ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು. ಬ್ರ್ಯಾಂಡ್ ಉತ್ಪನ್ನಗಳ ಸೋಗಿನಲ್ಲಿ ನಕಲಿ ಕ್ರೀಡಾ ಪರಿಕರ ಮಾರಾಟ ಮಾಡುತ್ತಿರುವ ಬಗ್ಗೆ ಬ್ರ್ಯಾಂಡ್ ಪ್ರೊಟೆಕ್ಟರ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ದಕ್ಷಿಣ ಭಾರತದ ಪ್ರಾದೇಶಿಕ ಮುಖ್ಯಸ್ಥ ಸ್ಟೀಫನ್ ರಾಜ್‍ ದೂರು ನೀಡಿದ್ದು ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಉಳ್ಳಾಲ ಠಾಣೆಯ ಪೊಲೀಸರು ₹ 3.5ಲಕ್ಷ ಮೌಲ್ಯದ ಕ್ರೀಡಾ ಪರಿಕರ ಹಾಗೂ ನಗರ ಉತ್ತರ ಠಾಣೆಯ ಪೊಲೀಸರು ₹ 5 ಲಕ್ಷ ಮೌಲ್ಯದ ಪರಿಕರ ವಶಪಡಿಸಿಕೊಂಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು. ಗ್ರಾಹಕರು ಬ್ರಾಂಡೆಡ್ ಪರಿಕರಗಳನ್ನು ಖರೀದಿಸುವಾಗ ಎಚ್ಚರವಹಿಸಬೇಕು. ನಕಲಿ ಉತ್ಪನ್ನಗಳನ್ನು ಹೆಚ್ಚೂ ಕಡಿಮೆ ನೈಜ ಉತ್ಪನ್ನಗಳಷ್ಟೇ ದರಕ್ಕೆ ಮಾರಾಟ ಮಾಡಲಾಗುತ್ತದೆ. ಗ್ರಾಹಕರನ್ನು ಆಕರ್ಷಿಸಲು ಶೇ 20ರಷ್ಟು ರಿಯಾಯಿತಿ ನೀಡಿದ್ದೆವು ಎಂದು ಮಳಿಗೆಯ ಮಾಲೀಕರು ತಿಳಿಸಿದ್ದಾರೆ. ಈ ನಕಲಿ ಉತ್ಪನ್ನಗಳು ಪಂಜಾಬಿನ ಜಲಂಧರ್‌ನಿಂದ ತರಿಸಿಕೊಂಡಿದ್ದು ಅವರ ಬಳಿ ಸಿಕ್ಕ ಬಿಲ್‌ಗಳಿಂದ ಇದು ಗೊತ್ತಾಗಿದೆ. ಇವುಗಳ ಪೂರೈಕೆದಾರರು ಹಾಗೂ ತಯಾರಕರ ಪತ್ತೆಗೆ ಕ್ರಮ ವಹಿಸಿದ್ದೇವೆ’ ಎಂದರು. ‘ತುಸು ಉಬ್ಬಿದ ಬ್ಯಾಜ್ ಸಂಖ್ಯೆ 3ಡಿ ಹೋಲೋಗ್ರಾಂ ಸಹಾಯದಿಂದ ಕ್ರೀಡಾ ಪರಿಕರ ಅಸಲಿಯೋ ನಕಲಿಯೋ ಎಂದು ಪತ್ತೆ ಹಚ್ಚಬಹುದು. ಅಸಲಿ ಮತ್ತು ನಕಲಿ ಉತ್ಪನ್ನಗಳ ಬಣ್ಣಗಳಲ್ಲೂ ತುಸು ವ್ಯತ್ಯಾಸ ಗುರುತಿಸಬಹುದು’ ಎಂದರು.

Leave a Reply

Your email address will not be published. Required fields are marked *