ಸುಳ್ಯ: 2024-25ನೇ ಸಾಲಿನ ಪ್ರತಿಷ್ಠಿತ ‘ಗಾಂಧಿ ಗ್ರಾಮ ಪುರಸ್ಕಾರ’ಕ್ಕೆ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ಭಾಜನವಾಗಿದ್ದು, ಅಭಿವೃದ್ಧಿ ಕಾರ್ಯಗಳಿಗಾಗಿ 4 ಲಕ್ಷ ರೂಪಾಯಿ ನಗದು ಪ್ರೋತ್ಸಾಹಧನ ಬಿಡುಗಡೆಯಾಗಿದೆ.

​ವಿಶೇಷವೆಂದರೆ, ಸಂಪಾಜೆ ಗ್ರಾಮ ಪಂಚಾಯತ್ 2013-14ರಲ್ಲಿ ಪ್ರಥಮ ಬಾರಿಗೆ ಹಾಗೂ 2020-21ರಲ್ಲಿ ದ್ವಿತೀಯ ಬಾರಿಗೆ ಈ ಪುರಸ್ಕಾರವನ್ನು ಪಡೆದುಕೊಂಡಿತ್ತು. ಇದೀಗ 2024-25ನೇ ಸಾಲಿನಲ್ಲಿ ತೃತೀಯ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ಅಭೂತಪೂರ್ವ ಸಾಧನೆ ಮಾಡಿದೆ. ರಾಜ್ಯ ಸರ್ಕಾರವು 2024-25ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕಾಗಿ ತಾಲ್ಲೂಕು ಮಟ್ಟದಲ್ಲಿ ಆಯ್ಕೆಯಾದ ಗ್ರಾಮ ಪಂಚಾಯಿತಿಗಳಿಗೆ ಪ್ರೋತ್ಸಾಹಧನವನ್ನು ಬಿಡುಗಡೆ ಮಾಡಿ ಆದೇಶ ಹೊರಡಿಸಿದ್ದು, ಇದರಲ್ಲಿ ಸಂಪಾಜೆ ಕೂಡ ಸ್ಥಾನ ಪಡೆದಿದೆ.

​ಈ ಹೆಮ್ಮೆಯ ಸಾಧನೆಗೆ ಶ್ರಮಿಸಿದ ಪಂಚಾಯತ್ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವರ್ಗಕ್ಕೆ ವಿಶೇಷ ಕೃತಜ್ಞತೆ ಸಲ್ಲಿಸಲಾಗಿದೆ. 2024ರ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಸರಿತಾ ಡಿಸೋಜ, ಪಂಚಾಯತ್ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀಮತಿ ಸುಮತಿ ಶಕ್ತಿವೇಲು, ಉಪಾಧ್ಯಕ್ಷರಾದ ಎಸ್.ಕೆ. ಹನೀಫ್ ಹಾಗೂ ಪಂಚಾಯತ್ ಸರ್ವ ಸದಸ್ಯರ ಸಹಕಾರವನ್ನು ಸ್ಮರಿಸಲಾಗಿದೆ.

​ಜೊತೆಗೆ, ಗ್ರಾಮದ ಅಭಿವೃದ್ಧಿಯಲ್ಲಿ ಕೈಜೋಡಿಸಿದ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಅರೋಗ್ಯ ಇಲಾಖೆ, ಸಂಜೀವಿನಿ ಒಕ್ಕೂಟ, ಗ್ರಂಥಾಲಯ ಸಿಬ್ಬಂದಿ, ಉದ್ಯೋಗ ಖಾತ್ರಿ ಯೋಜನೆ ಹಾಗೂ ಕಂದಾಯ ಇಲಾಖೆಯ ಗ್ರಾಮ ಆಡಳಿತ ಅಧಿಕಾರಿ ಮಂಜುನಾಥ್ ಅವರಿಗೆ ಧನ್ಯವಾದ ಅರ್ಪಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಇಲಾಖೆಯ ಕಾರ್ಯ ನಿರ್ವಹಣಾ ಅಧಿಕಾರಿ ರಾಜಣ್ಣ, ಇಂಜಿನಿಯರಿಂಗ್ ಇಲಾಖೆಯ ಫಯಾಜ್, ಮಣಿಕಂಠ ಹಾಗೂ ಚೈತ್ರ ಸೇರಿದಂತೆ ಪ್ರಶಸ್ತಿ ಬರಲು ಸಹಕರಿಸಿದ ಎಲ್ಲಾ ಇಲಾಖೆಯ ಸಿಬ್ಬಂದಿ ವರ್ಗದವರಿಗೂ ಪ್ರಕಟಣೆಯಲ್ಲಿ ಅಭಿನಂದನೆಗಳನ್ನು ತಿಳಿಸಲಾಗಿದೆ.

Leave a Reply

Your email address will not be published. Required fields are marked *