ಬಾಣಸವಾಡಿ ಅಗ್ನಿಶಾಮಕದಳ ಕಚೇರಿ ಬಳಿಯೇ ಶಾಲಾ ವಾಹನವೊಂದು ಹೊತ್ತಿ ಉರಿದಿದ್ದು, ಅದರೊಳಗಿದ್ದ ವ್ಯಕ್ತಿ ಸಜೀವ ದಹನ ಆಗಿದ್ದಾರೆ. OMBR ಲೇಔಟ್‌ನಲ್ಲಿ ರಾತ್ರಿ 10:08 ಕ್ಕೆ ಬಸ್ಸಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಅಗ್ನಿಶಾಮಕದಳ ವಾಹನ ದೌಡಾಯಿಸಿ ಬೆಂಕಿ ನಂದಿಸಲಾಗಿದೆ.
ಬಸ್ಸಿನ ಒಳಗೆ ಒಬ್ಬರು ಸಜೀವ ದಹನವಾಗಿದ್ದಾರೆ ಎಂದು ಬಾಣಸವಾಡಿ ಅಗ್ನಿಶಾಮಕದಳ ಕಚೇರಿ ಮಾಹಿತಿ ನೀಡಿದೆ. ಬಸ್‌ನ ಓಳಗೆ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 30 ವರ್ಷದ ಆಸುಪಾಸಿನ ವ್ಯಕ್ತಿ ಎಂದು ಅಂದಾಜಿಸಲಾಗಿದೆ. ಸ್ಥಳಕ್ಕೆ ರಾಮಮೂರ್ತಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅರುಣ್ ಎಂಬವರಿಗೆ ಸೇರಿದ ಖಾಸಗಿ ಶಾಲೆ ಬಸ್ ಇದಾಗಿದೆ. ಘಟನೆಯಲ್ಲಿ ಮೃತ ವ್ಯಕ್ತಿ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಗುರುತು ಇನ್ನೂ ಪತ್ತೆಯಾಗಿಲ್ಲ. ಘಟನೆ ಸಂಬಂಧ ಪೊಲೀಸರು ಯುಡಿಆರ್ ದಾಖಲಿಸಿಕೊಂಡಿದ್ದಾರೆ. ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.