ಮಂಗಳೂರು,ಜುಲೈ 28:- ಯಾವುದೇ ಪೂರ್ವ ತಯಾರಿ ಮಾಡದೇ ಹರಕೆ ಸಂದಾಯ ಮಾಡಿ ಕೈ ತೊಳೆದುಕೊಳ್ಳಬೇಕು ಎಂಬ ರೀತಿಯಲ್ಲಿ ತರಾತುರಿಯಲ್ಲಿ ನಡೆಸಲು ಉದ್ದೇಶಿಸಿರುವ ಕಡಬ ಪಟ್ಟಣ ಪಂಚಾಯತ್ ಚುನಾವಣೆಯನ್ನು ಕೂಡಲೇ ಮುಂದೂಡಬೇಕು ಮತ್ತು ಆಡಳಿತಾತ್ಮಕ ಕೆಲಸ ಕಾರ್ಯಗಳು ಆದ ಬಳಿಕ ಚುನಾವಣಾ ನಿಯಮಗಳನ್ನು ಪಾಲಿಸಿ ಸೂಕ್ತ ವ್ಯವಸ್ಥೆಯೊಂದಿಗೆ ಚುನಾವಣೆಯನ್ನು ಮಾಡಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಬೇಕೆಂದು ಒತ್ತಾಯಿಸಿ ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ನಿಯೋಗ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಉಸ್ತುವಾರಿಯವರ ಮುಖಾಂತರ ರಾಜ್ಯ ಚುನಾವಣಾ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಮನವಿ ಪತ್ರದಲ್ಲಿ, ಸುಮಾರು ಐದು ವರ್ಷಗಳ ಹಿಂದೆ ಮೇಲ್ದರ್ಜೆಗೆ ಏರಿದ ಕಡಬ ಪಟ್ಟಣ ಪಂಚಾಯತ್ ನಲ್ಲಿ ಚುನಾವಣೆ ನಡೆಯದೆ ಐದು ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದೆ ಆಡಳಿತಾಧಿಕಾರಿಯ ಆಡಳಿತಕ್ಕೆ ಒಳಪಟ್ಟಿತ್ತು. ದಿನಾಂಕ 17/08/25 ರಂದು ಚುನಾವಣೆ ನಡೆಸುವುದಾಗಿ ರಾಜ್ಯ ಚುನಾವಣಾ ಆಯೋಗವು ದಿನಾಂಕ 10/07/25 ರಂದು ರಾಜ್ಯಪತ್ರದ ಮೂಲಕ ಅಧಿಕೃತ ಘೋಷಣೆ ಮಾಡಿದೆ. ರಾಜ್ಯ ಚುನಾವಣಾ ಆಯೋಗವು ಚುನಾವಣಾ ದಿನಾಂಕವನ್ನು ಘೋಷಣೆ ಮಾಡುವಾಗ ಚುನಾವಣೆ ನಡೆಯುವ ಸಂಸ್ಥೆಗೆ ಸಂಬಂಧಪಟ್ಟ ಮತದಾರರ ಪಟ್ಟಿ, ವಾರ್ಡ್ ವಿಂಗಡಣೆ , ಸೇರಿದಂತೆ ಎಲ್ಲಾ ಕೆಲಸ ಕಾರ್ಯಗಳು ಪೂರ್ತಿಯಾಗಿರಬೇಕು. ಮತ್ತು ಘೋಷಣೆಗೂ ಮೊದಲೇ ನಿಖರವಾದ ಮತ್ತು ಪಾರದರ್ಶಕವಾದ ಮತದಾರರ ಪಟ್ಟಿ ಆದ ಬಳಿಕವೇ ಚುನಾವಣೆಯನ್ನು ಆಯೋಗವು ಘೋಷಿಸಬೇಕು ಎಂಬುವುದು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲಿಸಬೇಕಾದ ನಿಯಮವಾಗಿರುತ್ತದೆ. ಇದನ್ನು ದೇಶದ ಸರ್ವೋಚ್ಛ ನ್ಯಾಯಾಲಯ ಸೇರಿದಂತೆ ಕೆಳಸ್ತರದ ನ್ಯಾಯಾಲಯಗಳು ಹಲವಾರು ಸಂದರ್ಭಗಳಲ್ಲಿ ತನ್ನ ತೀರ್ಪಿನಲ್ಲಿ ಒತ್ತಿ ಹೇಳಿದ ವಿಚಾರವಾಗಿದೆ. ಆದರೆ ಕಡಬ ಪಟ್ಟಣ ಪಂಚಾಯತ್ ಚುನಾವಣೆಗೆ ದಿನ ನಿಗದಿಯಾಗಿ ಹದಿನೆಂಟು ದಿನ ಕಳೆದರೂ ಇನ್ನೂ ಮತದಾರರ ಪಟ್ಟಿ ಮತ್ತು ವಾರ್ಡ್ ಪುನರ್ವಿಂಗಡಣೆಯ ವಿವರ ಬಿಡುಗಡೆ ಆಗಿಲ್ಲ. ಜುಲೈ 29 ಕ್ಕೆ ಅಧಿಸೂಚನೆ ಜಾರಿಯಾಗಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭ ಗೊಳ್ಳಲಿದೆ. ಆದರೆ ಚುನಾವಣೆಗೆ ಸ್ಪರ್ಧಿಸಬೇಕಾದ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ಗೊಂದಲದಲ್ಲಿದೆ. ಇದು ಭಾರತದ ಸಂವಿಧಾನದ ಲೋಕತಾಂತ್ರಿಕ ತತ್ವಗಳಿಗೆ ಮತ್ತು ಕಾನೂನುಗಳಿಗೆ (ಉದಾ : ಪ್ರಾತಿನಿಧಿಕ ಜನಾಭಿಪ್ರಾಯ ಕಾಯಿದೆ 1951) ಸಂಪೂರ್ಣ ವಿರುದ್ಧವಾದ ತೀರ್ಮಾನವಾಗಿದೆ.
ಆದ್ದರಿಂದ ಯಾವುದೇ ಪೂರ್ವ ತಯಾರಿ ಮಾಡದೇ ಹರಕೆ ಸಂದಾಯ ಮಾಡಿ ಕೈ ತೊಳೆದುಕೊಳ್ಳಬೇಕು ಎಂಬ ರೀತಿಯಲ್ಲಿ ತರಾತುರಿಯಲ್ಲಿ ನಡೆಸಲು ಉದ್ದೇಶಿಸಿರುವ ಕಡಬ ಪಟ್ಟಣ ಪಂಚಾಯತ್ ಚುನಾವಣೆಯನ್ನು ಕೂಡಲೇ ಮುಂದೂಡಬೇಕು ಮತ್ತು ಆಡಳಿತಾತ್ಮಕ ಕೆಲಸ ಕಾರ್ಯಗಳು ಆದ ಬಳಿಕ ಚುನಾವಣಾ ನಿಯಮಗಳನ್ನು ಪಾಲಿಸಿ ಸೂಕ್ತ ವ್ಯವಸ್ಥೆಯೊಂದಿಗೆ ಚುನಾವಣೆಯನ್ನು ಮಾಡಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಪಾಡಬೇಕೆಂದು ಮಾನ್ಯ ಚುನಾವಣಾಧಿಕಾರಿಗಳಾದ ತಮ್ಮಲ್ಲಿ ಈ ಮೂಲಕ ವಿನಂತಿಸುತ್ತಿದ್ದೇನೆ ಎಂದು ವಿವರಿಸಿದ್ದಾರೆ.
ನಿಯೋಗದಲ್ಲಿ ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಬಜತ್ತೂರು, ಕಾರ್ಯದರ್ಶಿ ಅಶ್ರಫ್ ತಲಪಾಡಿ, ಜಿಲ್ಲಾ ಸಮಿತಿ ಸದಸ್ಯರಾದ ಹನೀಫ್ ಪುಂಜಾಲ್ಕಟ್ಟೆ ಹಾಗೂ ಅಬೂಬಕ್ಕರ್ ಮದ್ದ ಉಪಸ್ಥಿತರಿದ್ದರು.
