ಸುಳ್ಯ: ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರದಲ್ಲಿ ಮಕ್ಕಳ ಪ್ರತಿಭಾ ದಿನಾಚರಣೆ ಹಾಗೂ ಉದ್ಘಾಟನಾ ಕಾರ್ಯಕ್ರಮಗಳು ಡಿ.27 ರಂದು ನಡೆಯಿತು. ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರೀಯುತ ನಝೀರ್ ಶಾಂತಿನಗರ ಇವರು ಶಾಲಾ ಧ್ವಜಾರೋಹಣ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ಬಳಿಕ ಶ್ರೀಯುತ ನಝೀರ್ ಶಾಂತಿನಗರ ಇವರ ಅಧ್ಯಕ್ಷತೆಯಲ್ಲಿ ಪ್ರತಿಭಾ ಪುರಸ್ಕಾರದ ಸಭಾ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಅತಿಥಿಗಳು ಉದ್ಘಾಟಿಸಿದರು. ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಕರ್ನಾಟಕ ಇದರ ವತಿಯಿಂದ ನಮ್ಮ ಶಾಲೆಗೆ ಕೊಡುಗೆಯಾಗಿ ನೀಡಿದ ಮಕ್ಕಳ ಆಟೋಪಕರಣಗಳ ಉದ್ಘಾಟನೆಯನ್ನು ಸಂಸ್ಥೆಯ ಸಂಸ್ಥಾಪಕರಾದ ಶ್ರೀಯುತ ಉನೈಸ್ ಪೆರಾಜೆ ಅವರ ಉಪಸ್ಥಿತಿಯಲ್ಲಿ ಹಿರಿಯರಾದ ಶ್ರೀ ಗೋಪಾಲಕೃಷ್ಣ ಭಟ್ ಉದ್ಘಾಟಿಸಿ ಶುಭ ಹಾರೈಸಿದರು.
ಜಿಲ್ಲಾ ಪಂಚಾಯತ್ ವತಿಯಿಂದ ಬಿಡುಗಡೆಯಾದ ಅನುದಾನದಲ್ಲಿ ನಿರ್ಮಿಸಲಾದ ಬಾಲಕಿಯರ ಶೌಚಾಲಯವನ್ನು ಮಾನ್ಯ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ ಇವರು ಉದ್ಘಾಟಿಸಿ ಶುಭ ಹಾರೈಸಿದರು. ಶಾಲಾ ಮುಖ್ಯ ಗುರುಗಳು, ಎಸ್ ಡಿ ಎಂ ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಹಾಗೂ ಊರ ಮಹನೀಯರು ಸುವರ್ಣ ಸಂಭ್ರಮದ ಮೆಟ್ಟಿಲನ್ನು ಇನ್ನೇನು ಎರಡೇ ವರ್ಷಗಳಲ್ಲಿ ಕಾಲಿಡಲಿರುವ ನಮ್ಮ ಶಾಲೆಗೆ ಹೊಸ ಕಟ್ಟಡ ಹಾಗೂ ಸುರಕ್ಷತೆಗಾಗಿ ತಡೆಗೋಡೆ ನಿರ್ಮಿಸಿ ಕೊಡುವಂತೆ ಕೋರಿ ಮನವಿಯನ್ನು ಶಾಸಕರಿಗೆ ನೀಡಿದ್ದು, ಅದಕ್ಕೆ ಸ್ಪಂದಿಸಿದ ಶಾಸಕರು ಎರಡು ಕೊಠಡಿಗಳನ್ನು ನಿರ್ಮಿಸಿ ಕೊಡುವಂತೆ ಆಶ್ವಾಸನೆ ನೀಡಿದರು.
ವೇದಿಕೆಯಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು, ಮಾನ್ಯ ಶಾಸಕರಾದ ಕುಮಾರಿ ಭಾಗೀರಥಿ ಮುರುಳ್ಯ, ನಗರ ಪಂಚಾಯತ್ ಸುಳ್ಯ ಇದರ ನಿಕಟ ಪೂರ್ವ ಅಧ್ಯಕ್ಷರಾದ ಶಶಿಕಲಾ ನೀರಬಿದಿರೆ, ಹಿರಿಯರಾದ ಶ್ರೀ ಗೋಪಾಲಕೃಷ್ಣ ಭಟ್, ಶ್ರೀ ಅಬೂಬಕ್ಕರ್, ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ ಕರ್ನಾಟಕ ಇದರ ಸಂಸ್ಥಾಪಕರಾದ ಉನೈಸ್ ಪೆರಾಜೆ, ಹಿಂದೂ ಜಾಗರಣ ವೇದಿಕೆ ಅಧ್ಯಕ್ಷರಾದ ಶ್ರೀಯುತ ಚಂದ್ರಶೇಖರ ನೂಜಾಡಿ, ಗೌರವಾಧ್ಯಕ್ಷರಾದ ಶ್ರೀಯುತ ದಾಮೋದರ ಮಂಚಿ, ದೀಪಾಂಜಲಿ ಮಹಿಳಾ ಮಂಡಲ ಸ್ಥಾಪಕ ಅಧ್ಯಕ್ಷರಾದ ಹರ್ಷ ಕರುಣಾಕರ, ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀಯುತ ರಘುನಾಥ ಯು, ಸುಳ್ಯ ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿಯಾದ ಶ್ರೀಮತಿ ಮಮತಾ ಕೆ, ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ಪವಿತ್ರ ಹಾಗೂ ಶಾಲಾ ನಾಯಕ ಹರ್ಷಿತ್ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ನಡೆಸಿದ ಸ್ಪರ್ಧೆಗಳ ಬಹುಮಾನದ ಪಟ್ಟಿಯನ್ನು ಶಿಕ್ಷಕಿ ಶ್ರೀಮತಿ ಸವಿತಾ ರವರು ವಾಚಿಸಿದರು. ಅತಿಥಿಗಳಿಂದ ಬಹುಮಾನ ವಿತರಿಸಲಾಯಿತು. ಸಭಾ ಕಾರ್ಯಕ್ರಮಕ್ಕೆ ಶ್ರೀಮತಿ ಭಾಗ್ಯಶ್ರೀ ಎಸ್ಎನ್ ಸರ್ವರನ್ನು ಸ್ವಾಗತಿಸಿ, ಶ್ರೀಮತಿ ವಾಣಿಶ್ರೀ ಅವರು ವಂದಿಸಿದರು. ಕುಮಾರಿ ರಮ್ಯಶ್ರೀ ಡಿ ಕಾರ್ಯಕ್ರಮ ನಿರೂಪಿಸಿದರು. ಅಪರಾಹ್ನದ ಅವಧಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ಮಹಮ್ಮದ್ ಇಮಾದ್ ಹಾಗೂ ಆಯಿಷತ್ ರಿಫಾನಾ ನೆರವೇರಿಸಿದರು. ಅಂಗನವಾಡಿ ಪುಟಾಣಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಸಾಂಸ್ಕೃತಿಕ ಕಾರ್ಯಕ್ರಮಗಳ ವೀಕ್ಷಣೆಗಾಗಿ ಪೋಷಕರು, ವಿದ್ಯಾಭಿಮಾನಿಗಳು ಆಗಮಿಸಿದ್ದರು.
ಕಾರ್ಯಕ್ರಮದ ಯಶಸ್ಸಿಗೆ ಎಸ್ ಡಿ ಎಂ ಸಿ ಅಧ್ಯಕ್ಷರು, ಸರ್ವ ಸದಸ್ಯರು ಹಾಗೂ ಪೋಷಕರು ಮತ್ತು ಶಿಕ್ಷಕರು ಸಹಕರಿಸಿದರು.



