ಸುಳ್ಯ: ಕ್ರಿಕೆಟ್ ಆಟದಲ್ಲಿ ಫೋರ್, ಸಿಕ್ಸರ್ ಬಾರಿಸುವುದು ಎಷ್ಟು ಕಷ್ಟವೋ, ಮೈಕ್ ಹಿಡಿದು ಕ್ಷಣಕ್ಷಣದ ಆಟವನ್ನು ಬಣ್ಣಿಸುವುದು, ಅಂದರೆ ವೀಕ್ಷಕ ವಿವರಣೆ (Commentary) ನೀಡುವುದು ಕೂಡ ಅಷ್ಟೇ ಕಷ್ಟದ ಕೆಲಸ. ಭಾಷೆಯ ಮೇಲಿನ ಹಿಡಿತ, ಸಮಯ ಪ್ರಜ್ಞೆ ಮತ್ತು ಧ್ವನಿಯಲ್ಲಿನ ಏರಿಳಿತ ಬಹಳ ಮುಖ್ಯವಾಗುತ್ತದೆ. ಇಂತಹ ಕ್ಲಿಷ್ಟಕರ ಕೆಲಸವನ್ನು 14 ವರ್ಷದ ಬಾಲಕನೊಬ್ಬ ಅತ್ಯಂತ ಲೀಲಾಜಾಲವಾಗಿ ಮಾಡುತ್ತಾ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದ್ದಾನೆ.

​ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ಜಸ್ವಿತ್ ಎಂಬ ಬಾಲಕನೇ ಈ ಸಾಧಕ. ಇತ್ತೀಚೆಗೆ ಸುಳ್ಯದ ಕೆವಿಜಿ ವಿದ್ಯಾಸಂಸ್ಥೆಯಲ್ಲಿ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಜಸ್ವಿತ್ ವೀಕ್ಷಕ ವಿವರಣೆಗಾರನಾಗಿ (Commentator) ಎಲ್ಲರ ಗಮನ ಸೆಳೆದಿದ್ದಾನೆ.

ದ್ವಿಭಾಷಾ ಪ್ರಾವೀಣ್ಯತೆ:

ಸಾಮಾನ್ಯವಾಗಿ ಮಕ್ಕಳಿಗೆ ಕನ್ನಡ ಬಂದರೆ ಇಂಗ್ಲಿಷ್ ಕಷ್ಟ, ಇಂಗ್ಲಿಷ್ ಬಂದರೆ ಕನ್ನಡ ಸ್ಪಷ್ಟವಿರುವುದಿಲ್ಲ. ಆದರೆ ಜಸ್ವಿತ್, ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ನಿರರ್ಗಳವಾಗಿ ಕಾಮೆಂಟರಿ ನೀಡುವ ಮೂಲಕ ನೋಡುಗರನ್ನು ಹುಬ್ಬೇರಿಸುವಂತೆ ಮಾಡಿದ್ದಾನೆ. ಕ್ರಿಕೆಟ್‌ನ ತಾಂತ್ರಿಕ ಪದಗಳನ್ನು ಇಂಗ್ಲಿಷ್‌ನಲ್ಲಿ ಮತ್ತು ಅದರ ಭಾವಾರ್ಥವನ್ನು ಅಚ್ಚಗನ್ನಡದಲ್ಲಿ ವಿವರಿಸುವ ಜಸ್ವಿತ್‌ನ ಶೈಲಿಗೆ ಕ್ರೀಡಾಭಿಮಾನಿಗಳು ಮನಸೋತಿದ್ದಾರೆ. ಈ ಪ್ರತಿಭೆಯನ್ನು ಗುರುತಿಸಿದ ಕೆವಿಜಿ ಸಂಸ್ಥೆಯು ವೇದಿಕೆಯಲ್ಲಿ ಜಸ್ವಿತ್‌ನನ್ನು ಅಭಿನಂದಿಸಿದೆ.

ವೈರಲ್ ಆದ ವಿಡಿಯೋ:

ಕಿರಣ್ ಬೆಳ್ಳಾರೆ ಎಂಬುವವರು ಜಸ್ವಿತ್ ಕಾಮೆಂಟರಿ ನೀಡುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕೆಲವೇ ನಿಮಿಷಗಳಲ್ಲಿ ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇನ್ಸ್ಟಾಗ್ರಾಮ್ ನ ಪ್ರಮುಖ ಪೇಜ್ ಗಳಲ್ಲಿ ಒಂದಾಗಿರುವ rvcjinsta ಕೂಡಾ ಈ‌ ವಿಡಿಯೋ ಶೇರ್ ಮಾಡಿದ್ದು, ದೇಶದಾದ್ಯಂತ ವೈರಲ್ ಆಗಿದೆ.

​ವೀಡಿಯೋ ನೋಡಿದ ನೆಟ್ಟಿಗರು, “ಕ್ರಿಕೆಟ್ ಆಡುವವರು ಊರಲ್ಲಿ ಸಿಗುತ್ತಾರೆ, ಆದರೆ ಪಂದ್ಯಾವಳಿಗಳಿಗೆ ಉತ್ತಮ ಕಾಮೆಂಟೇಟರ್ ಸಿಗುವುದು ಕಷ್ಟ. ಜಸ್ವಿತ್‌ಗೆ ಉತ್ತಮ ಭವಿಷ್ಯವಿದೆ,” ಎಂದು ಪ್ರಶಂಸಿಸಿದ್ದಾರೆ. “ವಾವ್ ಏನ್ ಟ್ಯಾಲೆಂಟ್, ಗಾಡ್ ಬ್ಲೆಸ್ ಯು ಪುಟ್ಟ,” ಎಂದು ಹಾರೈಸಿ ಬಾಲಕನ ಪ್ರತಿಭೆಗೆ ಮೆಚ್ಚುಗೆ ಸೂಚಿಸಿದ್ದಾರೆ.

​ಗ್ರಾಮೀಣ ಭಾಗದ ಈ ಪುಟಾಣಿ ಪ್ರತಿಭೆ ಮುಂದಿನ ದಿನಗಳಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆದು, ನಮ್ಮೂರಿಗೆ ಕೀರ್ತಿ ತರಲಿ ಎಂಬುದೇ ಎಲ್ಲರ ಆಶಯ.

Leave a Reply

Your email address will not be published. Required fields are marked *