ಸುಳ್ಯ: ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಯುವಕನೋರ್ವನಿಗೆ ಸುಳ್ಯದ ನ್ಯಾಯಾಲಯವು ದಂಡದ ಜೊತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ವಿಶಿಷ್ಟ ಶಿಕ್ಷೆಯನ್ನು ವಿಧಿಸಿದೆ.

​ಸುಳ್ಯ ನಿವಾಸಿ ರಕ್ಷಿತ್ ಜಿ. ಎಂಬಾತನೇ ಈ ಶಿಕ್ಷೆಗೊಳಗಾದ ಯುವಕ. ಈತನ ವಿರುದ್ಧ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸುಳ್ಯ ಪೊಲೀಸ್ ಠಾಣೆಯಲ್ಲಿ ಐಎಂವಿ ಕಾಯ್ದೆಯಡಿ (ಕಲಂ 119 ರ/ವ 177, 184, 194-ಸಿ) ಮೂರು ಪ್ರತ್ಯೇಕ ಲಘು ಪ್ರಕರಣಗಳು ದಾಖಲಾಗಿದ್ದವು. ಪ್ರಕರಣದ ತನಿಖೆ ಪೂರ್ಣಗೊಳಿಸಿದ ಪೊಲೀಸ್ ಉಪ ನಿರೀಕ್ಷಕ ಸಂತೋಷ್ ಬಿ.ಪಿ. ಅವರು ಸುಳ್ಯದ ಎಸ್‌ಸಿಜೆ ಹಾಗೂ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ್ದರು.

​ಈ ಪ್ರಕರಣಗಳ (ಸಿ.ಸಿ. 42/26, 43/26 ಹಾಗೂ 44/26) ವಿಚಾರಣೆ ನಡೆಸಿದ ನ್ಯಾಯಾಲಯವು, ಆರೋಪಿಗೆ ಎರಡು ಪ್ರಕರಣಗಳಲ್ಲಿ ಒಟ್ಟು ₹3,000 ದಂಡ ವಿಧಿಸಿದೆ. ಇದರ ಜೊತೆಗೆ, ಮೂರು ಪ್ರಕರಣಗಳಿಗೆ ತಲಾ ಐದು ದಿನಗಳಂತೆ ಒಟ್ಟು 15 ದಿನಗಳ ಕಾಲ (ಮಾರ್ಚ್ 15 ರಿಂದ 29 ರವರೆಗೆ) ಸಮುದಾಯ ಸೇವೆ ಮಾಡುವಂತೆ ಮಹತ್ವದ ಆದೇಶ ನೀಡಿದೆ.

ಏನಿದು ಸಮುದಾಯ ಸೇವೆ?

ನ್ಯಾಯಾಲಯದ ಆದೇಶದಂತೆ, ಈ 15 ದಿನಗಳ ಕಾಲ ಯುವಕನು ಸುಳ್ಯ ಪೇಟೆಯ ಪ್ರಮುಖ ಜಂಕ್ಷನ್‌ಗಳಲ್ಲಿ ನಿಂತು ಸಂಚಾರ ನಿಯಮಗಳಿಗೆ ಸಂಬಂಧಿಸಿದ ಜಾಗೃತಿ ಫಲಕಗಳನ್ನು (ಪ್ಲಕಾರ್ಡ್) ಹಿಡಿದು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ.

​ಇದರೊಂದಿಗೆ, ಸಂಚಾರ ನಿಯಮಗಳನ್ನು ಗಾಳಿಗೆ ತೂರಿದ್ದಕ್ಕಾಗಿ ಆರೋಪಿಯ ವಾಹನ ಚಾಲನಾ ಪರವಾನಗಿಯನ್ನು (ಡ್ರೈವಿಂಗ್ ಲೈಸೆನ್ಸ್) ಮೂರು ತಿಂಗಳ ಕಾಲ ಅಮಾನತುಗೊಳಿಸಿಯೂ ನ್ಯಾಯಾಲಯ ಆದೇಶ ಹೊರಡಿಸಿದೆ.

Leave a Reply

Your email address will not be published. Required fields are marked *