“ಹೇ ಭಗವಂತ ಆಸ್ತಿ ಅಂತಸ್ತು ಎಲ್ಲವನ್ನೂ ಕರುಣಿಸಿದ ನೀನು ನಮಗೆ ಸಂತಾನ ಭಾಗ್ಯವನ್ನು ಕರುಣಿಸದೆ ನಮ್ಮ ಮಡಿಲು ಬರಿದು ಮಾಡಿದೆಯಲ್ಲವೇ ತಂದೇ ನಮ್ಮಿಂದ ಆದ ತಪ್ಪಾದರೂ ಏನು? ನನ್ನ ಹೆಂಡತಿ ಶಾರಾದಾಳ ದುಃಖ ನನ್ನಿಂದ ನೋಡಲು ಸಾಧ್ಯವಾಗುತ್ತಿಲ್ಲ ತಂದೆ ಹೇ ಭಗವಂತ ಈ ಸಂಕಟದಿಂದ ನಮ್ಮನ್ನು ಪಾರು ಮಾಡು” ಎಂದು ಭಾರವಾದ ಮನಸ್ಸಿನಿಂದ ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಸುಬ್ಬ ಭಟ್ಟರು ತಮ್ಮ ಹೆಂಡತಿಯನ್ನು ಕರೆದು ಯಾಕೋ ಮನಸ್ಸು ಸರಿ ಇಲ್ಲ ಇಬ್ಬರು ದೇವಸ್ಥಾನಕ್ಕೆ ಹೋಗಿ ಬರೋಣ ಎಂದರು. ಆಗ ಅವರ ಹೆಂಡತಿ ಕೂಡ ಹೋಗಿ ಬರೋಣ ನನ್ನ ಮನಸ್ಸು ಕೂಡ ನೆಮ್ಮದಿ ಬಯಸುತ್ತಿದೆ ಹೋಗಿ ಬಂದರೆ ಮನಸ್ಸು ಪ್ರಶಾಂತವಾಗುತ್ತದೆ ಎಂದರು.

ದಾರಿಯಲ್ಲಿ ಗಂಡ ಹೆಂಡತಿ ನಡೆದುಕೊಂಡು ಹೋಗುತ್ತಿರಬೇಕಾದರೆ ಇದ್ದಕ್ಕಿದ್ದಂತೆ ಕಾಡಿನಿಂದ ಮಗು ಅಳುವ ಶಬ್ದ ಕೇಳಿತು. ಸುಬ್ಬ ಭಟ್ಟರು ಹಾಗು ಅವರ ಹೆಂಡತಿ ಗಾಬರಿ ಆದರು. ಸುತ್ತ ಮುತ್ತ ನೋಡಿದರು ಆದರೆ ಎಲ್ಲೂ ಮಗು ಕಾಣಲಿಲ್ಲ.ಆದರೆ ಅಳು ನಿಲ್ಲಲಿಲ್ಲ.ಸುಬ್ಬ ಭಟ್ಟರು ಹೆಂಡತಿಯನ್ನು ಅಲ್ಲೇ ರಸ್ತೆ ಬದಿಯಲ್ಲಿ ನಿಲ್ಲಲು ಹೇಳಿ ಮಗುವನ್ನು ಹುಡುಕುತ್ತಾ ಕಾಡಿನಲ್ಲಿ ಅಲೆಯತೊಡಗಿದರು.ಅದೊಂದು ದೊಡ್ಡ ಮರದ ಕೆಳಗೆ ದಟ್ಟ ಕುರುಚಲು ಪೊದೆಗಳ ನಡುವೆ ಅನಾಥವಾಗಿ ಬಿದ್ದಿದ್ದ ಮಗು ಸುಬ್ಬ ಭಟ್ಟರ ಕಣ್ಣಿಗೆ ಬಿತ್ತು . ಓಡಿ ಹೋಗಿ ಮಗುವನ್ನು ಎತ್ತಿಕೊಂಡರು ಮುದ್ದಾದ ಹೆಣ್ಣು ಮಗು ತಮಗೇ ಅರಿವಿಲ್ಲದಂತೆ ಕಣ್ಣಿನಲ್ಲಿ ನೀರು ಸುರಿಯಲಾರಂಭಿಸಿತು.ಮಗುವನ್ನು ಅಪ್ಪಿ ಮುದ್ದಾಡಿದರು.ಮಗುವನ್ನು ಎತ್ತಿಕೊಂಡು ರಸ್ತೆ ಬದಿಯಲ್ಲಿ ನಿಂತಿದ್ದ ಹೆಂಡತಿಯ ಬಳಿ ಬಂದರು ದೂರದಿಂದ ಬರುತ್ತಿದ್ದ ಗಂಡನ ಕೈಯಲ್ಲಿ ಮಗುವನ್ನು ನೋಡಿ ಸುಬ್ಬ ಭಟ್ಟರ ಹೆಂಡತಿಗೆ ಆಶ್ಚರ್ಯವೂ ಸಂತೋಷವೂ ಆಯಿತು.ಬಳಿಗೆ ಬಂದ ಸುಬ್ಬ ಭಟ್ಟರು ಮಗುವನ್ನು ಕೈಯಲ್ಲಿ ಕೊಟ್ಟು ಈ ಮಗು ನಮಗೆ ಭಗವಂತನ ವರ ಪ್ರಸಾದ ಆ ಭಗವಂತ ಕೊನೆಗೂ ಕಣ್ಣು ಬಿಟ್ಟ ನಮ್ಮ ಬರಡಾದ ಮಡಿಲು ತುಂಬಿದ ಇಂದಿನಿಂದ ಇದೇ ನಮ್ಮ ಮಗು ಇದಕ್ಕೆ ಯಾವುದೇ ರೀತಿಯಲ್ಲೂ ಕಮ್ಮಿ ಆಗದಂತೆ ನಾವು ಸಾಕೋಣ ಒಳ್ಳೆಯ ವಿದ್ಯಾಭ್ಯಾಸ ಕೊಡಿಸೋಣ ಎಂದರು ಹೆಂಡತಿಯ ಸಂತೋಷಕ್ಕಂತೂ ಪಾರವೇ ಇರಲಿಲ್ಲ.ದಣಿದವನಿಗೆ ಮರುಭೂಮಿಯಲ್ಲಿ ನೀರು ಸಿಕ್ಕಂತಾಗಿತ್ತು ಆ ಮಹಾತಾಯಿಗೆ . ಬಹುಶಃ ಭವಿಷ್ಯದಲ್ಲಿ ತಾವು ಸಾಕಿದ ಇದೇ ಮಗಳಿಂದ ತಮ್ಮ ಪ್ರಾಣವೇ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಗೊತ್ತಾದರೆ ಆ ತಾಯಿ ಇಷ್ಟು ಸಂತೋಷ ಪಡುತ್ತಿರಲಿಲ್ಲವೋ ಏನೋ!

ಗಂಡ ಹೆಂಡತಿ ಇಬ್ಬರು ಆ ಮಗುವನ್ನು ಮನೆಗೆ ತೆಗೆದುಕೊಂಡು ಹೋದರು ಆ ಮುದ್ದಾದ ಹೆಣ್ಣು ಮಗುವಿಗೆ ಸುರಭಿ ಎಂದು ನಾಮಕರಣ ಮಾಡಿದರು.ಅಂತೂ ಇಂತೂ ಆ ಮಗು ಅವರ ಮಡಿಲು ತುಂಬಿದ ಮೇಲೆ ಸಂತೋಷವೇ ಸಂತೋಷ ದುಃಖ ಪಡಲು ಕಾರಣಗಳೇ ಇರಲಿಲ್ಲ.ಅಂತೂ ಇಂತೂ ದಂಪತಿಗಳಿಬ್ಬರು ಆ ಅನಾಥ ಮಗುವಿಗೆ ತಮ್ಮ ಪ್ರೀತಿಯನ್ನೆಲ್ಲಾ ಧಾರೆ ಎರೆದು ಯಾವುದಕ್ಕೂ ಕಮ್ಮಿ ಆಗದಂತೆ ಸಾಕಿ ಸಲಹಿದರು ಉತ್ತಮ ವಿದ್ಯಾಭ್ಯಾಸವನ್ನೂ ನೀಡಿದರು.
ಅಂತೂ ಇಂತೂ ನಮ್ಮ ಸುರಭಿ ಈಗ ಇಪ್ಪತ್ತರ ಹರೆಯದ ಚೆಲುವೆ.ಹಾಲಿನಂತ ಬಿಳುಪು,ಕಾಮನ ಬಿಲ್ಲಿನಂತಹ ಹುಬ್ಬು, ಬಟ್ಟಲು ಮುಖ,ಮುಖದ ಮೇಲೆ ಚಂದ್ರನನ್ನೇ ನಾಚಿಸುವಂತಹ ಮುಗ್ದ ನಗು,ನವಿಲನ್ನೇ ನಾಚಿಸುವಂತಹ ನಡಿಗೆ, ಮಗಳು ನಡೆದು ಬರುತ್ತಿದ್ದರೆ ತಂದೆಯ ಮುಖದಲ್ಲಿ ಸಂತಸ ತಾಯಿಯ ಮುಖದಲ್ಲಿ ಇನ್ನಿಲ್ಲದ ಮಂದಹಾಸ . ಅಲ್ಲದೆ ಮಗಳು ಡಾಕ್ಟರ್ ಓದುತ್ತಾಳೆ ದೊಡ್ಡ ಡಾಕ್ಟರ್ ಆಗುತ್ತಾಳೆ ನಮ್ಮ ಕನಸನ್ನೆಲ್ಲಾ ನನಸು ಮಾಡುತ್ತಾಳೆ ಒಂದು ಒಳ್ಳೆಯ ಕಡೆ ವಿದ್ಯಾವಂತ ಬುದ್ದಿವಂತ ಹುಡುಗನನ್ನು ನೋಡಿ ಮಗಳಿಗೆ ಮದುವೆ ಮಾಡಿಸಬೇಕು ಎಂದೆಲ್ಲಾ ಕನಸು ಕಾಣುತ್ತಾರೆ.
ಆದರೆ ಆದದ್ದೇ ಬೇರೆ ಹಾಲು ಬಿಳುಪಿನ ಚೆಲುವೆ ಸುರಭಿಗೆ ಕಾಲೇಜಿನಲ್ಲಿ ಒಬ್ಬನ ಪರಿಚಯವಾಗುತ್ತದೆ.ಅವನು ನೋಡಲೇನು ಚೆಲುವ ಅಲ್ಲ ಕೆದರಿದ ಕೂದಲು, ಉದ್ದನೆಯ ಮುಖ ಅವನ ವಿಚಿತ್ರ ವರ್ತನೆ ಇಬ್ಬರ ನಡುವೆ ಸ್ನೇಹ ವಾಗಿತ್ತು ಸ್ನೇಹ ಪ್ರೀತಿಗೆ ತಿರುಗಿತ್ತು ಅವನ ಗುಣಗಳೂ ಉತ್ತಮವಾಗಿರಲಿಲ್ಲ ಇವಳ ಮುಂದೆ ಒಳ್ಳೆಯವನಂತೆ ವರ್ತಿಸುತ್ತಿದ್ದ.ಆದರೆ ಅವನ ಕಪಟ ಅರ್ಥ ಆಗುವ ಹೊತ್ತಿಗೆ ಕಾಲ ಮಿಂಚಿ ಹೋಗಿತ್ತು.
ಸುಬ್ಬ ಭಟ್ಟರು ಮಗಳಿಗೆ ಮದುವೆ ಮಾಡಲು ತೀರ್ಮಾನ ಮಾಡಿದರು.ಅದಕ್ಕೆ ಹೊಂದಿಕೊಂಡಂತೆ ಒಂದು ಒಳ್ಳೆಯ ಕಡೆಯಿಂದ ಸಂಬಂಧ ಕೂಡ ಬಂದಿತ್ತು. ಸುಬ್ಬ ಭಟ್ಟರು ಹುಡುಗನ ಕಡೆ ಅವರನ್ನು ಮನೆಗೆ ಬರಲು ಹೇಳಿದರು.ಮನೆಯಲ್ಲೆಲ್ಲ ಸಂಭ್ರಮವೋ ಸಂಭ್ರಮ.
ಆದರೆ ಈ ವಿಷಯ ಕೇಳಿ ಸುರಭಿಗೆ ಸಿಡಿಲು ಬಡಿದಂತಾಯಿತು.ನನಗೆ ಈಗಲೇ ಮದುವೆ ಬೇಡ ಈಗಲೇ ಮದುವೆ ಆದರೆ ನಾನು ವೈದ್ಯೆ ಆಗಲು ಸಾಧ್ಯವಿಲ್ಲ ಎಂದೆಲ್ಲಾ ನೆಪ ಹೇಳಿದಳು ಆಗ ಸುಬ್ಬ ಭಟ್ಟರು ಹಾಗು ಅವರ ಹೆಂಡತಿ “ನೋಡು ಮಗಳೇ ನಮಗೂ ವಯಸ್ಸಾಗುತ್ತಿದೆ ಎಷ್ಟು ದಿನ ಇರುತ್ತೇವೋ ಗೊತ್ತಿಲ್ಲ ಅಷ್ಟರ ಒಳಗೆ ನಿನಗೊಂದು ಮದುವೆ ಮಾಡಿ ಮುಗಿಸಬೇಕೆಂಬ ಆಸೆ ದಯವಿಟ್ಟು ಇಲ್ಲ ಎನ್ನಬೇಡ” ಎಂದರು ಸುರಭಿ ರೂಮಿನತ್ತ ನಡೆದಳು ರೂಮಿಗೆ ನಡೆದ ಅವಳು ಕೂಡಲೇ ಒಂದು ನಿರ್ಧಾರಕ್ಕೆ ಬಂದಳು ಅವಳ ಆ ಒಂದು ನಿರ್ಧಾರ ತನ್ನ ತಂದೆ ತಾಯಿಯ ಬದುಕು ಸರ್ವನಾಶ ಮಾಡುತ್ತದೆ ಎಂದು ಗೋತ್ತಿದ್ದರೆ ಆ ನಿರ್ಧಾರ ಬದಲಾಯಿಸುತ್ತಿದ್ದಳೋ ಏನೋ!ಆ ನಿರ್ಧಾರ ಏನೆಂದರೆ ತನ್ನ ಪ್ರೀಯಕರನೊಂದಿಗೆ ಮನೆ ಬಿಟ್ಟು ಹೋಗುವ ನಿರ್ಧಾರ.ವಿಪರ್ಯಾಸ ಎಂದರೆ ಆ ನಿರ್ಧಾರ ತೆಗೆದುಕೊಳ್ಳುವ ಮುನ್ನ ಎಲ್ಲೋ ಕಾಡಿನಲ್ಲಿ ಅನಾಥವಾಗಿ ಬಿದ್ದಿದ್ದ ಅವಳನ್ನು ತಂದು ಸ್ವಂತ ಮಗಳಂತೆ ಸಾಕಿದ ತಂದೆ ತಾಯಿ ಅವಳಿಗೆ ನೆನಪಾಗದೇ ಇದ್ದದ್ದು .!
ಮಾರನೆಯ ದಿನ ಸುರಭಿ ಎಂದಿನಂತೆ ಕಾಲೇಜಿಗೆ ಹೋದಳು ಆದರೆ ಸಂಜೆ ಎಷ್ಟು ಹೊತ್ತಾದರು ಮನೆಗೆ ಬರುವುದೇ ಇಲ್ಲ ಇದರಿಂದ ಸುಬ್ಬ ಭಟ್ಟರು ಹಾಗು ಅವರ ಹೆಂಡತಿ ತುಂಬಾ ಗಾಬರಿ ಪಡುತ್ತಾರೆ ಸುತ್ತ ಮುತ್ತಲಿನವರಿಗೆ ಕೂಡ ವಿಷಯ ಗೊತ್ತಾಗುತ್ತದೆ ಆದರೆ ಎಷ್ಟು ಹುಡುಕಿದರೂ ಮಗಳು ಸಿಗುವುದೇ ಇಲ್ಲ ಸುಬ್ಬ ಭಟ್ಟರು ಹಾಗು ಅವರ ಹೆಂಡತಿ ಮಗಳು ಕಳೆದು ಹೋದ ವ್ಯತೆಯಲ್ಲಿಯೇ ದಿನ ದೂಡುತ್ತಿರುತ್ತಾರೆ.ಹೀಗಿರುವಾಗ ಇದ್ದಕ್ಕಿದ್ದಂತೆ ಮನೆಯ ಟೆಲಿಪೋನ್ ರಿಂಗಣಿಸಿತು ಆಗ ಪೋನ್ ತೆಗೆದು ಮಾತನಾಡಿದ ಸುಬ್ಬ ಭಟ್ಟರಿಗೆ ಸಹಿಸಲಾಗದ ಆಘಾತ”ನಾನು ಸುರಭಿ ನಾನು ಅಮರ್ ಪರಸ್ಪರ ಪ್ರೀತಿಸಿದ್ದು ಈಗ ವಿವಾಹವೂ ಆಗಿದ್ದೇವೆ ನಾವು ಚೆನ್ನಾಗಿ ಇದ್ದೇವೆ ನೀವು ನಮ್ಮನ್ನು ಹುಡುಕುವ ಪ್ರಯತ್ನ ಮಾಡಬೇಡಿ”ಕರೆ ಕಟ್ಟಾಯಿತು ಮನೆಯವರ ಹೃದಯ ಒಡೆದು ಹೋಯಿತು.
ಈ ಆಘಾತವನ್ನು ಸುಬ್ಬ ಭಟ್ಟರು ಹಾಗು ಅವರ ಹೆಂಡತಿ ಸಹಿಸದಾದರು ಎಲ್ಲೋ ಇದ್ದವಳನ್ನು ತಂದು ಸಾಕಿ ಸಲಹಿ ನಮಗೆ ಇಂತಾ ದ್ರೋಹವಾಯಿತಲ್ಲ ಇದ್ದ ಒಬ್ಬ ಮಗಳೂ ಕೈ ತಪ್ಪಿ ಹೋದಳಲ್ಲಾ ಎಂಬ ನೋವಿನಲ್ಲಿ ಖಿನ್ನತೆಗೆ ಜಾರಿದರು.
ಉರಿನ ನೆರೆ ಹೊರೆಯವರೆಲ್ಲಾ ತಲೆಗೊಂದು ಮಾತನಾಡಿದರು,ಹೀಯಾಳಿಸುತ್ತಿದ್ದರು,ಅವಮಾನಿಸುತ್ತಿದ್ದರು ಈ ಅವಮಾನ ಸಹಿಸಲಾಗದೆ ಸುಬ್ಬ ಭಟ್ಟರು ಹಾಗು ಅವರ ಹೆಂಡತಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡರು! ಎಂತಾ ವಿಪರ್ಯಾಸ.!
ಈ ವಿಷಯ ತಿಳಿದ ಸುರಭಿ ಆಘಾತಕ್ಕೊಳಗಾದಳು.ಅಷ್ಟೊತ್ತಿಗಾಗಲೆ ಅವಳು ಯಾರಿಗೋಸ್ಕರ ಎಲ್ಲವನ್ನು ಬಿಟ್ಟು ಬಂದಿದ್ದಳೋ ಅವನ ಸಂಪೂರ್ಣ ಬಂಡವಾಳ ಬಯಲಾಗಿತ್ತು.ಕುಡಿತದ ಚಟಕ್ಕೆ ದಾಸನಾಗಿದ್ದ ಅವನು ದಿನಾಲು ಕುಡಿದು ಬಂದು ಸುರಭಿಗೆ ಚಿತ್ರ ಹಿಂಸೆ ನೀಡುತ್ತಿದ್ದ.ಇದೆಲ್ಲದರಿಂದಾಗಿ ಸುರಭಿ ಪಶ್ಚಾತಾಪದ ಬೆಂಕಿಯಲ್ಲಿ ಬೆಂದು ಹೋಗಿದ್ದಳು.ತಾನು ತಂದೆ ತಾಯಿಗೆ ಮಾಡಿದ ದ್ರೋಹ ಅವಳಿಗೆ ಮುಳ್ಳಿನಂತೆ ಚುಚ್ಚುತ್ತಿತ್ತು. ಇದನ್ನೆಲ್ಲಾ ಸಹಿಸಲಾಗದೆ ಸುರಭಿಯೂ ಕೂಡ ತನ್ನ ತಂದೆ ತಾಯಿಯ ದಾರಿ ಹಿಡಿದಳು ವೈದ್ಯೆ ಆಗಬೇಕಿದ್ದ ಹುಡುಗಿ ಯಾರೋ ಅಪರಿಚಿತನ ಮೋಸಕ್ಕೆ ಬಲಿಯಾಗಿ ಮಸಣ ಸೇರಿದಳು.ಅವನಿಗೆ ಶಿಕ್ಷೆ ಏನೋ ಆಯಿತು ಆದರೆ ಹೋದ ಜೀವಗಳು ಮರಳಿ ಬರಲು ಸಾಧ್ಯವೇ?
ಕಥೆ: ಬರೆದವರು: ಪ್ರಾಪ್ತಿ ಗೌಡ