ಶಿವಮೊಗ್ಗ, ಡಿಸೆಂಬರ್ 18: ಕಾಂಗ್ರೆಸ್ ಪಕ್ಷದ ಪ್ರತಿಭಟನೆ ವೇಳೆ ಬಂದೋಬಸ್ತ್ ಡ್ಯೂಟಿಯಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಕೊರಳಲ್ಲಿದ್ದ ಮಾಂಗಲ್ಯ ಸರವನ್ನೇ ಕಳ್ಳರು ಎಗರಿಸಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಗಾಂಧಿ ಕುಟುಂಬದ ವಿರುದ್ಧದ ಪಿತೂರಿ ಕಾನೂನುಬಾಹಿರ ಎಂದು ಸಾಬೀತಾದ ಹಿನ್ನೆಲೆಯಲ್ಲಿ, ಜಿಲ್ಲಾ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಯತ್ನಿಸಿದ್ದರು.

ಈ ವೇಳೆ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರತಿಭಟನೆ ಹಿನ್ನೆಲೆ ಶಿವಮೊಗ್ಗ ಬಿಜೆಪಿ ಕಚೇರಿಗೆ ಬಂದೋಬಸ್ತ್ಗೆಂದು ASI ಅಮೃತಾಬಾಯಿ ಬಂದಿದ್ದರು. ಪ್ರತಿಭಟನೆ ವೇಳೆ ಕಳ್ಳರು ಕೈಚಳಕ ತೋರಿದ್ದು, ಅವರ ಕತ್ತಲ್ಲಿದ್ದ ಸುಮಾರು 60 ಗ್ರಾಂ ಮಾಂಗಲ್ಯಸರವನ್ನು ಕಳವು ಮಾಡಲಾಗಿದೆ. ಪೊಲೀಸ್ ಅಧಿಕಾರಿ ಎಂಬ ಭಯವೂ ಇಲ್ಲದೆ ಕಳ್ಳರು ಕೃತ್ಯ ನಡೆಸಿದ್ದು, ದೊಡ್ಡಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.ಚಿನ್ನದ ಮಾಂಗಲ್ಯ ಸರ ಕಳುವಾಗಿರುವುದು ತಿಳಿಯುತ್ತಿದ್ದಂತೆಯೇ ಎಎಸ್‌ಐ ಅಮೃತಾ ಅವರು ಸ್ಥಳದಲ್ಲೇ ಕಣ್ಣೀರು ಹಾಕಿದ ಘಟನೆ ನಡೆಯಿತು. ಕರ್ತವ್ಯ ನಿರತ ಅಧಿಕಾರಿಯೊಬ್ಬರ ಸರವೇ ಕಳುವಾಗಿರುವುದು ಇಲಾಖೆಗೆ ಮತ್ತು ಸಹೋದ್ಯೋಗಿಗಳಿಗೆ ಭಾರೀ ಮುಜುಗರ ತಂದಿದೆ. ಕೂಡಲೇ ಸ್ಥಳದಲ್ಲಿದ್ದ ಇತರೆ ಪೊಲೀಸ್ ಅಧಿಕಾರಿಗಳು ಅಮೃತಾ ಅವರಿಗೆ ಸಾಂತ್ವನ ಹೇಳಿ, ಧೈರ್ಯ ತುಂಬುವ ಪ್ರಯತ್ನ ಮಾಡಿದರು.

Leave a Reply

Your email address will not be published. Required fields are marked *