ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಕುದುರೆಮುಖ ವನ್ಯಜೀವಿ ವಿಭಾಗದ ವ್ಯಾಪ್ತಿಯಲ್ಲಿ ಬರುವ ಪ್ರಮುಖ ಚಾರಣ (Trekking) ಪ್ರದೇಶಗಳಲ್ಲಿ ಇಂದಿನಿಂದಲೇ (ಜ.14) ಅನ್ವಯವಾಗುವಂತೆ ಚಾರಣವನ್ನು ತಾತ್ಕಾಲಿಕವಾಗಿ ನಿಷೇಧಿಸಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ.

ಕಾರ್ಕಳದ ಕುದುರೆಮುಖ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಈ ಆದೇಶವನ್ನು ಹೊರಡಿಸಿದ್ದು, ಮುಂದಿನ ಆದೇಶದವರೆಗೆ ಈ ನಿಷೇಧ ಜಾರಿಯಲ್ಲಿರುತ್ತದೆ ಎಂದು ತಿಳಿಸಿದ್ದಾರೆ.
ನಿಷೇಧ ಎಲ್ಲೆಲ್ಲಿ ಅನ್ವಯ?
ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ಮತ್ತು ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯದೊಳಗಿನ ಚಾರಣ ಮಾರ್ಗಗಳಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ.
ಪ್ರಮುಖ ನಿಷೇಧಿತ ಚಾರಣ ಮಾರ್ಗಗಳು:
- ಗಂಗಡಿಕಲ್ಲು
- ಕುದುರೆಮುಖ ಶಿಖರ
- ಕುರಿಂಜಲ್
- ವಾಲಿಕುಂಜ (ಎಸ್ಕೆ ಬಾರ್ಡರ್ ಹಾಗೂ ಕರ್ವಾಶೆ ಮಾರ್ಗ)
- ನರಸಿಂಹ ಪರ್ವತ (ಕಿಗ್ಗಾ ಹಾಗೂ ಮಲಂದೂರು ಮಾರ್ಗ)
- ಕೊಡಚಾದ್ರಿ (ವಾಲೂರು, ಹಿಡ್ಲುಮನೆ ಫಾಲ್ಸ್ ಮಾರ್ಗ)
ಅರಣ್ಯ ಅಧಿಕಾರಿಗಳು ಈ ಪ್ರದೇಶಗಳಲ್ಲಿ ಎಚ್ಚರಿಕೆ ಫಲಕಗಳನ್ನು ಅಳವಡಿಸಲು ಮತ್ತು ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಿಬ್ಬಂದಿಗಳನ್ನು ನಿಯೋಜಿಸಲು ಸೂಚಿಸಿದ್ದಾರೆ. ಸಾಹಸ ಪ್ರಿಯರು ಹಾಗೂ ಸಾರ್ವಜನಿಕರು ಅರಣ್ಯ ಇಲಾಖೆಯೊಂದಿಗೆ ಸಹಕರಿಸಬೇಕು. ನಿಯಮ ಉಲ್ಲಂಘಿಸಿ ಅರಣ್ಯ ಪ್ರವೇಶಿಸಿದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಸಿದೆ.
