ಉಡುಪಿ ಸೆಪ್ಟೆಂಬರ್ 16: ಈ ಬಾರಿ ಉಡುಪಿ ಶ್ರೀಕೃಷ್ಣ ಜನ್ಮಾಷ್ಠಮಿಗೆ ಆರ್ ಸಿಬಿ ತಂಡವೇ ಆಗಮಿಸಿದ್ದು, ಈ ಬಾರಿಯ ವಿಶೇಷವಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿದೆ. ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮ. ಪ್ರತೀ ವರ್ಷ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಕಿಕ್ಕಿರಿದು ವಿಟ್ಲಪಿಂಡಿ ಉತ್ಸವಕ್ಕೆ ಸೇರುತ್ತಾರೆ. ಕೃಷ್ಣಮಠದ ಸಿಬ್ಬಂದಿ ಹಾಗೂ ಗೊಲ್ಲರು ರಥಬೀದಿ ಸುತ್ತಲೂ ಹಾಕಲಾದ ಗುರ್ಜಿಗಳಲ್ಲಿ ಇಡಲಾದ ಮಡಿಕೆ ಒಡೆದು ವಿಟ್ಲಪಿಂಡಿಗೆ ಚಾಲನೆ ನೀಡುತ್ತಾರೆ. ಇದಾದ ಬಳಿಕ ಪರ್ಯಾಯ ಯತಿ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿ ಸೇರಿದಂತೆ ಅಷ್ಟಮಠದ ಯತಿಗಳು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಇನ್ನು ಈ ಮೆರವಣಿಗೆಯಲ್ಲಿ ಹುಲಿವೇಷ ಸೇರಿ ನಾನಾ ರೀತಿಯ ವೇಷಗಳನ್ನು ಹಾಕಿ ಜನರು ಪಾಲ್ಗೊಳ್ಳುತ್ತಾರೆ. ಈ ಬಾರಿ ವಿಟ್ಲ ಪಿಂಡಿ ಉತ್ಸವದಲ್ಲಿ ಭಾರತದ ಕ್ರಿಕೆಟ್ ಸ್ಟಾರ್ ವಿರಾಟ್ ಕೊಹ್ಲಿ ಕೂಡಾ ಭಾಗವಹಿಸಿದ್ದಾರೆ. ಹೌದು, ಥೇಟ್ ವಿರಾಟ್ ಕೊಹ್ಲಿಯಂತೆಯೇ ಕಾಣುವ ಯುವಕನೊಬ್ಬ ಆರ್‌ಸಿಬಿ ಟೀಶರ್ಟ್, ಐಪಿಎಲ್ ಕಪ್ ಹಿಡಿದುಕೊಂಡು ಮೆರವಣಿಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಸೋಷಿಯಲ್ ಮೀಡಿಯಾದಲ್ಲಿ ವಿರಾಟ್ ಕೊಹ್ಲಿಯೇ ವಿಟ್ಲ ಪಿಂಡಿಗೆ ಬಂದಿದ್ದಾರೆ ಎಂದು ವೈರಲ್ ಆಗುತ್ತಿದೆ. ಯಥಾವತ್ ಕೊಹ್ಲಿಯನ್ನೇ ಹೋಲುವ ದೆಹಲಿಯ ವ್ಯಕ್ತಿ ಕೈಯಲ್ಲಿ ಕಪ್ ಹಿಡಿದು ಜೂನಿಯರ ಕ್ರಿಸ್ ಗೈಲ್ಸ್ ಜತೆ ಸಂಭ್ರಮಿಸಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಗೇಲ್ ತದ್ರೂಪಿಯನ್ನು ಕಂಡು ಜನರು ಒಂದು ಕ್ಷಣ ಅವಕ್ಕಾಗಿದ್ದಾರೆ.

