ಉಪ್ಪಿನಂಗಡಿ ನವೆಂಬರ್ 13: ನಿಗೂಢ ಕಾರಣಕ್ಕೆ ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ ಘಟನೆ ನವೆಂಬರ್ 12 ರಂದು ನಡೆದಿದೆ. ಮೃತಳನ್ನು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪಾರಡ್ಕ ನಿವಾಸಿ ಶ್ರೀಧರ ಕುಂಬಾರ ಅವರ ಪುತ್ರಿ ಹರ್ಷಿತಾ (15) ಎಂದು ಗುರುತಿಸಲಾಗಿದೆ. ಉಪ್ಪಿನಂಗಡಿ ಪ್ರೌಢ ಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದಳು. ನವೆಂಬರ್ 4ರಂದು ತಲೆನೋವು ಎಂದು ಹೇಳಿ ಶಾಲೆಗೆ ಹೋಗದೆ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮದ ಪಾರಡ್ಕ ಎಂಬಲ್ಲಿರುವ ತಮ್ಮ ಮನೆಯಲ್ಲಿದ್ದಳು, ಈ ವೇಳೆ ಮನೆಯಲ್ಲಿ ತಂದಿಟ್ಟಿದ್ದ ಹುಲ್ಲಿಗೆ ಸಿಂಪಡಿಸುವ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದಳು.

ಘಟನೆಯಾಗುವ ವೇಳೆ ಕೂಲಿ ಕೆಲಸಕ್ಕೆ ತೆರಳಿದ್ದ ತಾಯಿ ಮನೆಗೆ ಬಂದು ಅಸ್ವಸ್ಥಳಾದ ಮಗಳನ್ನು ಪುತ್ತೂರು ಆಸ್ಪತ್ರೆಗೆ ಕರೆದೊಯ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ನವೆಂಬರ್ 12ರಂದು ಹರ್ಷಿತಾ ಮೃತಪಟ್ಟಿದ್ದಾರೆ. ಹರ್ಷಿತಾಳಿಗೆ ಕಡಬದ ರಾಜೇಶ್ ಎಂಬಾತನು ಫೋನ್ ಮಾಡಿ ಕಿರುಕುಳ ನೀಡಿರುವ ಸಾಧ್ಯತೆ ಇರುವುದರಿಂದ ಈಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸಂಶಯ ಇದೆ ಎಂದು ಹರ್ಷಿತಾಳ ತಂದೆ ಶ್ರೀಧರ್ ಕುಂಬಾರ ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.



Source: Mangalore mirror
