ಅಶ್ಮಿಲ್ ಯುವಕರಿಗೆ ಮಾದರಿ; ಆಡಳಿತದಲ್ಲಿ ಬಡವರ ಪರ ಕಾಳಜಿ ವಹಿಸಲು ಟಿ.ಎಂ. ಶಾಹಿದ್ ತೆಕ್ಕಿಲ್ ಕಿವಿಮಾತು

ಕಾಸರಗೋಡು ಸಮೀಪದ ಕುನಿಯ ಸಮೂಹ ಶಿಕ್ಷಣ ಸಂಸ್ಥೆ ಹಾಗೂ ಐಎಎಸ್ ಅಕಾಡೆಮಿಯಲ್ಲಿ ವ್ಯಾಸಂಗ ಮಾಡಿ, ಕೇಂದ್ರ ಲೋಕಸೇವಾ ಆಯೋಗದ (UPSC) ಪರೀಕ್ಷೆಯಲ್ಲಿ 382ನೇ ರ್ಯಾಂಕ್ ಗಳಿಸಿದ ಮೊಹಮದ್ ಅಶ್ಮಿಲ್ ಶಾಹ್ ಹುದವಿ ಅವರನ್ನು ಸಂಸ್ಥೆಯ ವತಿಯಿಂದ ಕುನಿಯ ಕ್ಯಾಂಪಸ್ನಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.

ಸಾಧಕನಿಗೆ ಸನ್ಮಾನ ಮತ್ತು ಕಿವಿಮಾತು:
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು ಸಾಧಕನಿಗೆ ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಅಶ್ಮಿಲ್ ಶಾಹ್ ಹುದವಿ ಅವರ ಈ ಉನ್ನತ ಸಾಧನೆಗೆ ಚೆಮ್ಮಾಡ್ ದಾರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ಬುನಾದಿ ಹಾಗೂ ಯುಪಿಎಸ್ಸಿ ಪರೀಕ್ಷೆಗಾಗಿ ಕುನಿಯ ಸಮೂಹ ಶಿಕ್ಷಣ ಸಂಸ್ಥೆ ಮತ್ತು ಐಎಎಸ್ ಅಕಾಡೆಮಿ ನೀಡಿದ ಅತ್ಯುತ್ತಮ ತರಬೇತಿಯೇ ಕಾರಣ. ಕುನಿಯ ಇಬ್ರಾಹಿಂ ಅಹ್ಮದ್ ಅಲಿ ಹಾಜಿ ಅವರ ದೂರದೃಷ್ಟಿಯ ಫಲ ಕೇವಲ ಎರಡು ವರ್ಷಗಳಲ್ಲಿಯೇ ಗೋಚರಿಸಿದೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯ ಮೂಲಕ ಹಲವರು ಉನ್ನತ ಹುದ್ದೆಗೇರಲಿದ್ದು, ಅಶ್ಮಿಲ್ ಯುವಕರಿಗೆ ಮಾದರಿಯಾಗಿದ್ದಾರೆ” ಎಂದು ಶ್ಲಾಘಿಸಿದರು.
”ಅವರ ಇಚ್ಛೆಯಂತೆ ಐಎಫ್ಎಸ್ (ಭಾರತೀಯ ವಿದೇಶಾಂಗ ಸೇವೆ) ದೊರೆತರೆ ಪ್ರಪಂಚದ ನಾನಾ ಭಾಗಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಸಿಗಲಿದೆ. ಒಂದು ವೇಳೆ ಐಎಎಸ್ ಅಧಿಕಾರಿಯಾದರೆ ದೇಶದ ವಿವಿಧ ಕಡೆಗಳಲ್ಲಿ ಕಾರ್ಯನಿರ್ವಹಿಸಬಹುದು. ಯಾವುದೇ ಹುದ್ದೆ ಲಭಿಸಿದರೂ ಬಡವರು ಮತ್ತು ತುಳಿತಕ್ಕೊಳಗಾದವರ ಬಗ್ಗೆ ಅಪಾರ ಕಾಳಜಿ ವಹಿಸಿ ಸೇವೆ ಮಾಡಬೇಕು” ಎಂದು ಶಾಹಿದ್ ತೆಕ್ಕಿಲ್ ಕಿವಿಮಾತು ಹೇಳಿದರು.
ಜೊತೆಗೆ, ಕರ್ನಾಟಕದ ಕರಾವಳಿ ಮತ್ತು ಕೊಡಗು ಜಿಲ್ಲೆಯ ಜನರಿಗೂ ಅನುಕೂಲವಾಗುವಂತೆ ಬೃಹತ್ ಶಿಕ್ಷಣ ಸಂಸ್ಥೆ ಸ್ಥಾಪಿಸಿ, ಪ್ರಪಂಚದ ಭೂಪಟದಲ್ಲಿ ಕುನಿಯವನ್ನು ಪರಿಚಯಿಸಿದ ಇಬ್ರಾಹಿಂ ಅಹಮದ್ ಅಲಿ ಹಾಜಿ ಹಾಗೂ ಅಶ್ಮಿಲ್ ಅವರ ಕುಟುಂಬಸ್ಥರು ಮತ್ತು ಅಧ್ಯಾಪಕರನ್ನು ಅವರು ವಿಶೇಷವಾಗಿ ಅಭಿನಂದಿಸಿದರು.
ಗಣ್ಯರ ಉಪಸ್ಥಿತಿ:
ಸಮಾರಂಭದ ಅಧ್ಯಕ್ಷತೆಯನ್ನು ಕಣ್ಣೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಹಾಗೂ ಕುನಿಯ ಸಂಸ್ಥೆಯ ಸಲಹೆಗಾರರಾದ ಡಾ. ಖಾದರ್ ಮಾಂಗಾಡ್ ವಹಿಸಿದ್ದರು.
ವೇದಿಕೆಯಲ್ಲಿ ಶಾಸಕರಾದ ಸಿ.ಎಚ್. ಕುಂಜಂಬು, ಎ.ಕೆ.ಎಂ. ಅಶ್ರಫ್, ಬಿಹಾರದ ಮುಜಾಫರ್ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಬುಲ್ಲಾ ಅನ್ಸಾರಿ ಐಪಿಎಸ್, ಕಾಸರಗೋಡು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಶಿವಂ ಐಪಿಎಸ್, ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಾಬು ಅಬ್ರಹಾಂ, ಬ್ಲಾಕ್ ಪಂಚಾಯತ್ ಅಧ್ಯಕ್ಷ ಅಬ್ದುಲ್ಲ ಕುನ್ಹಿ, ಪೆರಿಯ ಪಂಚಾಯತ್ ಅಧ್ಯಕ್ಷೆ ಡಾ. ಸಬಿತ, ಪಳ್ಳಿಕ್ಕರೆ ಪಂಚಾಯತ್ ಅಧ್ಯಕ್ಷೆ ಶೋಭನ, ಡಾ. ಸಂತೋಷ್, ಸುದೀಪ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಾಮೂಹಿಕ ಇಫ್ತಾರ್ ಕೂಟ:
ಶಿಬಿಲಿ ಶಹಾದತಿ ಅವರು ಕುನಿಯ ಐಎಎಸ್ ಅಕಾಡೆಮಿ ಮತ್ತು ಶಿಕ್ಷಣ ಸಂಸ್ಥೆಯ ಕುರಿತು ವಿವರಿಸಿದರು. ಡಾ. ಲಕ್ಷ್ಮೀಬಾಯಿ ಸ್ವಾಗತಿಸಿ, ಅಜ್ಮಲ್ ವಂದಿಸಿದರು. ಸಮಾರಂಭದ ಬಳಿಕ ಸುಮಾರು ಎರಡು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಾಧಕರೊಂದಿಗೆ ಸಾಮೂಹಿಕ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.




