ಭಾರತೀಯ ಐಟಿ ಕ್ಷೇತ್ರದ ಪ್ರಮುಖ ಕಂಪನಿಗಳಿಗೆ ಅಮೆರಿಕ ಸರ್ಕಾರ ಬಿಗ್ ಶಾಕ್ ನೀಡಿದ್ದು, ಟಿಸಿಎಸ್, ಇನ್ಫೋಸಿಸ್, ವಿಪ್ರೋ, ಎಚ್ಸಿಎಲ್ ಹಾಗೂ ಕಾಗ್ನಿಜೆಂಟ್ ಸೇರಿದಂತೆ 8 ಪ್ರಮುಖ ಟೆಕ್ ಸಂಸ್ಥೆಗಳನ್ನು ಶಾಶ್ವತ ಕಾರ್ಮಿಕ ಪ್ರಮಾಣೀಕರಣ (PERM) ಪ್ರಕ್ರಿಯೆಯಿಂದ ಅಮಾನತುಗೊಳಿಸಿದೆ. ಈ ಪಟ್ಟಿಯಲ್ಲಿ ಮೈಕ್ರೋಸಾಫ್ಟ್ ಮತ್ತು ಅಡೋಬ್ ಕಂಪನಿಗಳೂ ಸೇರಿವೆ.
ಅಮೆರಿಕದಲ್ಲಿ ಉದ್ಯೋಗ ಆಧಾರಿತ ಗ್ರೀನ್ ಕಾರ್ಡ್ ಪಡೆಯಲು ಈ ಪ್ರಕ್ರಿಯೆ ಅತ್ಯಂತ ನಿರ್ಣಾಯಕವಾಗಿದ್ದು, ನಿಯಮಗಳ ದುರ್ಬಳಕೆ ಹಾಗೂ ಸ್ಥಳೀಯ ಅಮೆರಿಕನ್ನರ ಉದ್ಯೋಗ ಹಿತಾಸಕ್ತಿ ಕಾಪಾಡುವ ಉದ್ದೇಶದಿಂದ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಈ ನಿರ್ಧಾರದಿಂದಾಗಿ ಈ ಕಂಪನಿಗಳ ಮೂಲಕ ಹೊಸದಾಗಿ ಗ್ರೀನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದನ್ನು ಹಾಗೂ ಬಾಕಿ ಉಳಿದಿರುವ ಅರ್ಜಿಗಳ ಪ್ರಕ್ರಿಯೆಯನ್ನು ಅಮೆರಿಕ ಕಾರ್ಮಿಕ ಇಲಾಖೆ ತಡೆಹಿಡಿದಿದ್ದು, ಅಲ್ಲಿ ನೆಲೆಸಲು ಬಯಸುವ ಸಾವಿರಾರು ಭಾರತೀಯ ಉದ್ಯೋಗಿಗಳಿಗೆ ಇದು ದೊಡ್ಡ ಹಿನ್ನಡೆಯಾಗಿದೆ.
