Nammasullia: RCB ಫ್ರಾಂಚೈಸಿ ಪಾಲಿಗೆ ಜೂನ್ 4 ಎಂಬುದು ಕಪ್ಪುಚುಕ್ಕೆ. ಈ ‘ಕಪ್’ಚುಕ್ಕೆಯೊಂದಿಗೆ ಚೊಚ್ಚಲ ಬಾರಿ ಟ್ರೋಫಿ ಗೆದ್ದ ಖುಷಿಯಲ್ಲಿದ್ದ ಆರ್ಸಿಬಿ ಅಭಿಮಾನಿಗಳ ಸಂಭ್ರಮವು ಒಂದೇ ದಿನಕ್ಕೆ ಸೀಮಿತವಾಗಿತ್ತು. ಜೂನ್ 3 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ಆರ್ಸಿಬಿ ಚೊಚ್ಚಲ ಬಾರಿಗೆ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ಈ ಗೆಲುವಿನ ಬೆನ್ನಲ್ಲೇ ಬೆಂಗಳೂರಿನಲ್ಲಿ ಸಂಭ್ರಮಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಜೂನ್ 4 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಈ ಸಂಭ್ರಮಾಚರಣೆಯ ವೇಳೆ ಉಂಟಾದ ಕಾಲ್ತುಳಿತದಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ 11 ಅಭಿಮಾನಿಗಳು ಮೃತಪಟ್ಟಿದ್ದರು. ಇನ್ನೂ ಹಲವರು ಗಾಯಗೊಂಡಿದ್ದರು. ಈ ಅಹಿತಕರ ಘಟನೆ ಆರ್ಸಿಬಿ ಪಾಲಿಗೆ ಕಪ್ಪು ಚುಕ್ಕೆಯಾಗಿ ಮಾರ್ಪಟ್ಟಿದೆ.
ಈ ದುರ್ಘಟನೆಗೆ ವಿರಾಟ್ ಕೊಹ್ಲಿ ಕೂಡ ಖೇದ ವ್ಯಕ್ತಪಡಿಸಿದ್ದಾರೆ. ಜೂನ್ 4 ರಂದು ನಡೆದ ಹೃದಯವಿದ್ರಾವಕ ಘಟನೆಯನ್ನು ನಾವು ಜೀವನದಲ್ಲೇ ನಿರೀಕ್ಷಿಸಿರಲಿಲ್ಲ. ನಮ್ಮ ಫ್ರಾಂಚೈಸಿಯ ಇತಿಹಾಸದಲ್ಲಿ ಅತ್ಯಂತ ಸಂತೋಷದಾಯಕ ಕ್ಷಣವಾಗಿರಬೇಕಾಗಿತ್ತು… ಆದರೆ ದುರಂತವಾಗಿ ಮಾರ್ಪಟ್ಟಿತು. ನಾವು ಕಳೆದುಕೊಂಡವರ ಕುಟುಂಬಗಳಿಗಾಗಿ ಮತ್ತು ಗಾಯಗೊಂಡ ನಮ್ಮ ಅಭಿಮಾನಿಗಳ ಬಗ್ಗೆ ಯೋಚಿಸುತ್ತಿದ್ದೇನೆ ಮತ್ತು ಪ್ರಾರ್ಥಿಸುತ್ತಿದ್ದೇನೆ. ನಿಮ್ಮ ನಷ್ಟವು ಈಗ ನಮ್ಮ ಕಥೆಯ ಭಾಗವಾಗಿದೆ. ಒಟ್ಟಾಗಿ, ನಾವು ಕಾಳಜಿ, ಗೌರವ ಮತ್ತು ಜವಾಬ್ದಾರಿಯೊಂದಿಗೆ ಮುಂದುವರಿಯುತ್ತೇವೆ ,” ಎಂದು ವಿರಾಟ್ ಕೊಹ್ಲಿ ಹೇಳಿದ್ದನ್ನು ಉಲ್ಲೇಖಿಸಿ ಆರ್ಸಿಬಿ ಪೋಸ್ಟ್ವೊಂದನ್ನು ಹಂಚಿಕೊಂಡಿದೆ.
ಅಷ್ಟೇ ಅಲ್ಲದೆ ಈ ದುರ್ಘಟನೆಯ ಬಳಿಕ ಎಚ್ಚೆತ್ತುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ “ಆರ್‌ಸಿಬಿ ಕೇರ್ಸ್” ಮೂಲಕ ಒಂದಷ್ಟು ಸಾಮಾಜಿಕ ಕಾರ್ಯಕ್ರಮ ಏರ್ಪಡಿಸಲು ಮುಂದಾಗಿದೆ. ಈ ಅಭಿಯಾನಕ್ಕಾಗಿ ಆರ್ಸಿಬಿ 6 ಅಂಶಗಳನ್ನು ಒಳಗೊಂಡ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಆ ಪ್ರಣಾಳಿಕೆಯ ಸಾರಾಂಶ ಈ ಕೆಳಗಿನಂತಿದೆ…
ಅಗತ್ಯ ಬೆಂಬಲ ಒದಗಿಸುವುದು: ಕೇವಲ ಆರ್ಥಿಕವಾಗಿ ಮಾತ್ರವಲ್ಲದೆ, ಬಾಧಿತ ಕುಟುಂಬಗಳಿಗೆ ತ್ವರಿತ, ಪಾರದರ್ಶಕ ಮತ್ತು ಮಾನವೀಯ ರೀತಿಯಲ್ಲಿ ಸಹಾಯವನ್ನು ತಲುಪಿಸುವುದು.


ಸುರಕ್ಷಿತ ವಾತಾವರಣವನ್ನು ಸೃಷ್ಟಿಸುವುದು: ಉತ್ತಮ ಜನಸಂದಣಿ ನಿರ್ವಹಣಾ ಪ್ರೋಟೋಕಾಲ್‌ಗಳನ್ನು ವಿನ್ಯಾಸಗೊಳಿಸಲು ಕ್ರೀಡಾಂಗಣದ ಅಧಿಕಾರಿಗಳು, ಕ್ರೀಡಾ ಸಂಸ್ಥೆಗಳು ಮತ್ತು ಲೀಗ್ ಪಾಲುದಾರರೊಂದಿಗೆ ನಿಕಟವಾಗಿ ಕೆಲಸ ನಿರ್ವಹಿಸುವುದು.
ಸಮುದಾಯ ಸಬಲೀಕರಣ: ಗ್ರಾಮೀಣ ಕರ್ನಾಟಕದಲ್ಲಿ, ವಿಶೇಷವಾಗಿ ಸಿದ್ದಿ ಸಮುದಾಯದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಾರಂಭಿಸುವುದು.
ಸ್ವತಂತ್ರ ಸಂಶೋಧನೆ ಮತ್ತು ಸುರಕ್ಷತಾ ಹೂಡಿಕೆಗಳು: ಅಭಿಮಾನಿ-ಸುರಕ್ಷತಾ ಲೆಕ್ಕಪರಿಶೋಧನಾ ಚೌಕಟ್ಟನ್ನು ರಚಿಸಿ ಮತ್ತು ಜನಸಂದಣಿ ನಿರ್ವಹಣೆ ಮತ್ತು ತುರ್ತು ಪ್ರತಿಕ್ರಿಯೆಯ ಕುರಿತು ಸ್ಥಳೀಯ ತಂಡಗಳಿಗೆ ತರಬೇತಿ ನೀಡುವುದು.
ಅಭಿಮಾನಿಗಳ ಸ್ಮರಣೆ: ಆರ್‌ಸಿಬಿಯ ಅತ್ಯಂತ ಉತ್ಸಾಹಭರಿತ ಅಭಿಮಾನಿಗಳ ಕಥೆಗಳು ಮತ್ತು ಹೆಸರುಗಳನ್ನು ಗೌರವಿಸಲು ಬೆಂಗಳೂರಿನಲ್ಲಿ ವಿಶೇಷ ಸ್ಮಾರಕ ಸ್ಥಳವನ್ನು ರಚಿಸುವುದು.
ಕ್ರೀಡಾ ಭವಿಷ್ಯ ನಿರ್ಮಾಣ: ಈ ತಂಡದ ಮೇಲಿನ ನಂಬಿಕೆ ಕ್ರೀಡಾಂಗಣಗಳಿಗೆ ಮಾತ್ರ ಸೀಮಿತವಾಗಿರಬಾರದು. ಕ್ರೀಡಾಂಗಣಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸಿ, ಸ್ಥಳೀಯ ಪ್ರತಿಭೆಗಳನ್ನು ಪೋಷಿಸಿ ಮತ್ತು ಮುಂದಿನ ಪೀಳಿಗೆಯ ಕ್ರೀಡಾ ವೃತ್ತಿಪರರನ್ನು ಬೆಂಬಲಿಸುವುದು.
ಈ ಮೂಲಕ ಆರ್ಸಿಬಿ ಅಭಿಮಾನಿಗಳ ಬಗ್ಗೆ ವಿಶೇಷ ಕಾಳಜಿವಹಿಸಲು ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮುಂದಾಗಿದೆ.