ಪ್ರಕೃತಿ ಸಂರಕ್ಷಣೆ ಪ್ರತಿಯೊಬ್ಬರ ಜೀವನಶೈಲಿಯ ಭಾಗವಾಗಬೇಕು: ಪ್ರೊ. ಸಂಜೀವ ಕೆ
ಎನ್ನೆಂಸಿ, ಸುಳ್ಯ; ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇಲ್ಲಿನ ನೇಚರ್ ಕ್ಲಬ್ ಮತ್ತು ಐ.ಕ್ಯೂ.ಎ.ಸಿ ವತಿಯಿಂದ ವಿಶ್ವ ಪ್ರಕೃತಿ ಸಂರಕ್ಷಣಾ ದಿನದ ಪ್ರಯುಕ್ತ ವಿಶೇಷ ಉಪನ್ಯಾಸ ಕಾರ್ಯಕ್ರಮ ಜುಲೈ 28ನೇ ಸೋಮವಾರದಂದು ಕಾಲೇಜಿನ ಕಿರು ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಪರಿಸರ ಪ್ರೇಮಿ, ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಸಂಜೀವ ಕೆ ಮಾತನಾಡುತ್ತಾ “ಪ್ರಕೃತಿ ಉಳಿಸುವುದು ಕೇವಲ ಒಬ್ಬರ ಜವಾಬ್ದಾರಿ ಅಲ್ಲ, ಅದು ಪ್ರತಿಯೊಬ್ಬರ ಜೀವನಶೈಲಿಯ ಭಾಗವಾಗಬೇಕು. ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳುವ ಸಣ್ಣಪುಟ್ಟ ಪರಿಸರ ಪೂರಕ ಬದಲಾವಣೆಗಳು ಪ್ರಕೃತಿ ಸಂರಕ್ಷಣೆಗೆ ಅಪಾರ ಕೊಡುಗೆ ನೀಡಬಲ್ಲದು. ವಿದ್ಯಾರ್ಥಿಗಳು ಪ್ರಕೃತಿ ಸ್ನೇಹಿಯಾಗಿ ಬದುಕು ಸಾಗಿಸಬೇಕಾಗಿದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಮಾತನಾಡಿ, “ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಬೆಳೆಸಲು ಈ ರೀತಿಯ ಕಾರ್ಯಕ್ರಮಗಳು ಪ್ರೇರಕ ಶಕ್ತಿಯಾಗಿದೆ. ನಾವು ಪ್ರಕೃತಿಯೊಂದಿಗೆ ಹೊಂದಾಣಿಕೆಯಿಂದ ಬದುಕಬೇಕಾಗಿದೆ” ಎಂದರು. ವೇದಿಕೆಯಲ್ಲಿ ಕಾಲೇಜಿನ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ರತ್ನಾವತಿ ಡಿ, ಐ.ಕ್ಯೂ.ಎ.ಸಿ ಸಂಯೋಜಕರಾದ ಡಾ. ಮಮತಾ ಕೆ ಉಪಸ್ಥಿತರಿದ್ದರು.
ನೇಚರ್ ಕ್ಲಬ್ ಸದಸ್ಯೆ ಅಭಿಜ್ಞಾ ಪ್ರಾರ್ಥಿಸಿ, ದ್ವಿತೀಯ ಜೀವ ವಿಜ್ಞಾನ ಪದವಿಯ ಅರ್ಪಿತಾ ಸ್ವಾಗತಿಸಿದರು. ನೇಚರ್ ಕ್ಲಬ್ ಸಂಯೋಜಕ ಮತ್ತು ಸಸ್ಯಶಾಸ್ತ್ರ ವಿಭಾಗ ಮುಖ್ಯಸ್ಥರಾದ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತನಾಡಿ, ನೇಚರ್ ಕ್ಲಬ್ ಸದಸ್ಯೆ ಬಿಂದುಶ್ರೀ ವಂದಿಸಿದರು. ತೃತೀಯ ಬಿಎಸ್ಸಿಯ ಮನಸ್ವಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಜೀವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪರಿಸರ ಗೀತೆಯನ್ನು ಹಾಡಿ ಮನರಂಜಿಸಿದರು.
ಕಾರ್ಯಕ್ರಮದ ಯಶಸ್ಸಿಗೆ ಜೀವ ವಿಜ್ಞಾನ ವಿಭಾಗಗಳ ಉಪನ್ಯಾಸಕರಾದ ಕೃತಿಕಾ ಮತ್ತು ಪಲ್ಲವಿ ಹಾಗೂ ಸಿಬ್ಬಂದಿಗಳಾದ ಶಿವಾನಂದ ಮತ್ತು ದ್ವಿತೀಯ ವಿಜ್ಞಾನ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಸಹಕರಿಸಿದರು.

