ಜಾಲ್ಸೂರು: ಜ್ವರ ಮತ್ತು ಕೆಮ್ಮಿಗೆ ಚಿಕಿತ್ಸೆ ಪಡೆಯಲು ಬಂದ ರೋಗಿಯೊಬ್ಬರಿಗೆ ಅವಧಿ ಮೀರಿದ (Expired) ಔಷಧಿ ನೀಡಿದ ಘಟನೆ ಜಾಲ್ಸೂರಿನ ಖಾಸಗಿ ಕ್ಲಿನಿಕ್ ಒಂದರಲ್ಲಿ ನಡೆದಿದೆ ಎಂದು ಆರೋಪಿಸಲಾಗಿದ್ದು, ಈ ಕುರಿತು ತಾಲೂಕು ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ದೂರು ಸಲ್ಲಿಕೆಯಾಗಿದೆ.
    ಘಟನೆಯ ವಿವರ:
    ಕನಕಮಜಲು ನಿವಾಸಿಯಾದ ರೋಗಿಯೊಬ್ಬರು ಜ್ವರ ಮತ್ತು ಕೆಮ್ಮಿನ ಹಿನ್ನೆಲೆಯಲ್ಲಿ ಜಾಲ್ಸೂರಿನ ಖಾಸಗಿ ಕ್ಲಿನಿಕ್‌ಗೆ ಭೇಟಿ ನೀಡಿ ಔಷಧಿ ಪಡೆದುಕೊಂಡಿದ್ದರು. ಆ ಔಷಧಿಯನ್ನು ಸೇವಿಸಿದ ಬಳಿಕ ರೋಗಿ ಮತ್ತಷ್ಟು ಅಸ್ವಸ್ಥಗೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಸಂಶಯಗೊಂಡು ಔಷಧಿಯ ಬಾಟಲಿಯನ್ನು ಪರಿಶೀಲಿಸಿದಾಗ, ಅದರ ಮೇಲಿದ್ದ ಎಕ್ಸ್‌ಪೈರಿ ದಿನಾಂಕದ ಜಾಗಕ್ಕೆ ಮಾರ್ಕರ್ ಪೆನ್ನಿನಿಂದ ಗೀಚಿರುವುದು ಪತ್ತೆಯಾಗಿದೆ.
    ಬಳಿಕ ಆ ಮಾರ್ಕರ್ ಕರೆಯನ್ನು ಸ್ಪ್ರೇ ಬಳಸಿ ಸ್ವಚ್ಛಗೊಳಿಸಿ ನೋಡಿದಾಗ, ಅದು ತಿಂಗಳ ಹಿಂದೆಯೇ ಅವಧಿ ಮುಕ್ತಾಯಗೊಂಡಿದ್ದ ಔಷಧಿ ಎಂಬುದು ಬೆಳಕಿಗೆ ಬಂದಿದೆ ಎಂದು ರೋಗಿಯ ಕಡೆಯವರು ಆರೋಪಿಸಿದ್ದಾರೆ.
    ಸಾರ್ವಜನಿಕರ ಆಕ್ರೋಶ, ಅಧಿಕಾರಿಗಳಿಗೆ ದೂರು:
    ಈ ಹಿಂದೆಯೂ ಇದೇ ಕ್ಲಿನಿಕ್‌ನಲ್ಲಿ ಇಂತಹ ಘಟನೆಗಳು ನಡೆದಿವೆ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ. ಗ್ರಾಮೀಣ ಭಾಗದ ಜನರು ವೈದ್ಯರನ್ನು ನಂಬಿ ಚಿಕಿತ್ಸೆಗೆ ಬರುವಾಗ, ಇಂತಹ ನಿರ್ಲಕ್ಷ್ಯ ವಹಿಸುವುದು ಜನರ ಜೀವದ ಜೊತೆ ಚೆಲ್ಲಾಟವಾಡಿದಂತೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಘಟನೆಗೆ ಸಂಬಂಧಿಸಿದಂತೆ ರೋಗಿಯ ಕಡೆಯವರು ಈಗಾಗಲೇ ತಾಲೂಕು ಆರೋಗ್ಯಾಧಿಕಾರಿ (THO) ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ (DHO) ಲಿಖಿತ ದೂರು ನೀಡಿದ್ದು, ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವಿನಂತಿಸಿದ್ದಾರೆ. “ಈ ಆರೋಪದ ಕುರಿತು ಕ್ಲಿನಿಕ್ ಕಡೆಯಿಂದ ಇನ್ನೂ ಯಾವುದೇ ಅಧಿಕೃತ ಸ್ಪಷ್ಟನೆ ಲಭ್ಯವಾಗಿಲ್ಲ”

    Leave a Reply

    Your email address will not be published. Required fields are marked *