ಸಾರ್ವಜನಿಕ‌ ಹಾಗೂ ಕಾರ್ಮಿಕರ ರಕ್ಷೆ ನಮ್ಮೆಲ್ಲರ ‌ ಹೊಣೆ

ಮಂಗಳೂರು: ನಗರದಲ್ಲಿ ಸುರಿಯುತ್ತಿರುವ ಮುಂಗಾರು ಮಳೆಯ ಆರ್ಭಟಕ್ಕೆ ನಾಗುರಿಯಲ್ಲಿ ಸಂಭವಿಸಿದ ತಡೆಗೋಡೆ ಕುಸಿತದ ದುರಂತಕ್ಕೆ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷರಾದ ಟಿ.ಎಂ. ಶಹೀದ್ ತೆಕ್ಕಿಲ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಸಂತ್ರಸ್ತ ಕುಟುಂಬಕ್ಕೆ ತಕ್ಷಣದ ಪರಿಹಾರ ಹಾಗೂ ರಕ್ಷಣಾ ಕ್ರಮಗಳಿಗೆ ಆಗ್ರಹಿಸಿದ್ದಾರೆ.
ನಾಗುರಿಯ ಗರೋಡಿಯ ಮಾರಿಯಲ್ ಹೌಸ್ ಬಳಿ ಮುಂಜಾನೆ ಸಂಭವಿಸಿದ ಈ ಘೋರ ದುರಂತದಲ್ಲಿ ಬಿಹಾರ ಮೂಲದ ಕಾರ್ಮಿಕ ಕುಟುಂಬದ ಇಬ್ಬರು ಮುಗ್ಧ ಮಕ್ಕಳು ಸೇರಿದಂತೆ ಮೂವರು ದುರ್ಮರಣ ಹೊಂದಿದ ಸುದ್ದಿ ಅತ್ಯಂತ ಹೃದಯವಿದ್ರಾವಕವಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.

ತಕ್ಷಣದ ಪರಿಹಾರಕ್ಕೆ ಒತ್ತಾಯ

“ಕೂಲಿ ಅರಸಿ ಬಂದ ಬಡ ಕಾರ್ಮಿಕ ಕುಟುಂಬದ ಆಧಾರಸ್ತಂಭವಾಗಿದ್ದ ಜೀವಗಳು ಮಳೆಯ ಅಬ್ಬರಕ್ಕೆ ಬಲಿಯಾಗಿರುವುದು ಭರಿಸಲಾಗದ ನಷ್ಟ. ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಸರ್ಕಾರ ಮತ್ತು ಜಿಲ್ಲಾಡಳಿತವು ಯಾವುದೇ ವಿಳಂಬವಿಲ್ಲದೆ ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಮಟ್ಟದ ತುರ್ತು ಗರಿಷ್ಠ ಪರಿಹಾರ ಧನವನ್ನು ಘೋಷಿಸಬೇಕು ಎಂದರು.

‘ಸಾರ್ವಜನಿಕ ಹಾಗೂ ಕಾರ್ಮಿಕರ ರಕ್ಷೆ ನಮ್ಮೆಲ್ಲರ ಹೊಣೆ’
ಕರಾವಳಿಯಲ್ಲಿ ಮಳೆ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಅಗತ್ಯತೆಯನ್ನು ಒತ್ತಿ ಹೇಳಿದ ಅವರು, ಸಾರ್ವಜನಿಕ ಹಾಗೂ ಕಾರ್ಮಿಕರ ರಕ್ಷೆ ನಮ್ಮ ಹೊಣೆ ಎಂದು ನೆನಪಿಸಿದರು.
ನಗರದಾದ್ಯಂತ ಇಂತಹ ಅಪಾಯಕಾರಿ ತಡೆಗೋಡೆಗಳು, ಗುಡ್ಡದ ಅಂಚಿನಲ್ಲಿರುವ ಮನೆಗಳು ಹಾಗೂ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸಿಸುತ್ತಿರುವ ಶ್ರಮಿಕ ವರ್ಗದ ಸುರಕ್ಷತೆಗೆ ಮಹಾನಗರ ಪಾಲಿಕೆ ಮತ್ತು ಕಾರ್ಮಿಕ ಇಲಾಖೆ ತಕ್ಷಣವೇ ಜಂಟಿ ಸಮೀಕ್ಷೆ ನಡೆಸಿ, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಅವರು ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.

Leave a Reply

Your email address will not be published. Required fields are marked *