ಜಾಗತಿಕ ಮಟ್ಟದಲ್ಲಿ ಕೊಡಗಿನ ಹೆಮ್ಮೆ:


ಕೊಡಗು:ಅಪ್ರತಿಮ ಪ್ರತಿಭೆ ಮತ್ತು ಕಠಿಣ ಪರಿಶ್ರಮವಿದ್ದರೆ ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ಯಶಸ್ಸಿನ ಶಿಖರವನ್ನು ಏರಬಹುದು ಎಂಬುದನ್ನು ಕೊಡಗಿನ ಮಾದಾಪುರದ ಯುವಕರೊಬ್ಬರು ಸಾಬೀತುಪಡಿಸಿದ್ದಾರೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ಬಹುನಿರೀಕ್ಷಿತ ಎತಿಹಾದ್ ರೈಲು ಸೇವೆಯ ಚೊಚ್ಚಲ ಪ್ರಯಾಣಿಕರ ರೈಲನ್ನು ಯಶಸ್ವಿಯಾಗಿ ಚಲಾಯಿಸುವ ಮೂಲಕ ಸುಳ್ಯದ ಪತ್ರಕರ್ತ ಹಸೈನಾರ್ ಜಯನಗರ ಇವರ ಹಿರಿಯ ಸಹೋದರನ ಪುತ್ರ ಮಾದಾಪುರ ಮೂಲದ ರಿಯಾಜ್ ನಜೀರ್ ಅವರು ಜಾಗತಿಕ ಸಾರಿಗೆ ಇತಿಹಾಸದಲ್ಲಿ ತಮ್ಮ ಹೆಸರನ್ನು ಸುವರ್ಣಾಕ್ಷರಗಳಲ್ಲಿ ಬರೆದಿದ್ದಾರೆ. ಜೂನ್ 29, 2026 ರಂದು ನಡೆದ ಈ ಐತಿಹಾಸಿಕ ಕ್ಷಣ ಇಡೀ ಭಾರತ ದೇಶ ಹಾಗೂ ಕರ್ನಾಟಕವೇ ಹೆಮ್ಮೆ ಪಡುವಂತೆ ಮಾಡಿದೆ.
ರಿಯಾಜ್ ನಜೀರ್ ಅವರ ಈ ಸಾಧನೆಯ ಹಿಂದೆ ಅವರ ಸಂಸ್ಕಾರಯುತ ಕೌಟುಂಬಿಕ ಹಿನ್ನೆಲೆಯೂ ಅಡಗಿದೆ. ಇವರು ಮಾದಾಪುರದ ಸ್ಥಳೀಯ ಜಮಾಅತ್‌ನ ಸಕ್ರಿಯ ಸದಸ್ಯರು ಹಾಗೂ ಹಲವು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿರುವ ನಜೀರ್ ಅವರ ಪುತ್ರರಾಗಿದ್ದಾರೆ.
ಅಷ್ಟೇ ಅಲ್ಲದೆ, ಇವರ ತಾತ (ನಜೀರ್ ಅವರ ತಂದೆ) ಮಮ್ಮು ಮುಕ್ರಿಚ್ಚ ಅವರು ತಮ್ಮ ಕಾಲದಲ್ಲಿ ಮಾದಾಪುರ ಮಸೀದಿಯಲ್ಲಿ ಸುದೀರ್ಘ ಕಾಲ ಸ್ತುತ್ಯಾರ್ಹ ಸೇವೆ ಸಲ್ಲಿಸಿದ ಮಹನೀಯರಾಗಿದ್ದಾರೆ. ಊರಿನ ಎಲ್ಲಾ ಸತ್ಕಾರ್ಯಗಳ ಮುಂದಾಳುತನ ವಹಿಸುತ್ತಿದ್ದ ಮಮ್ಮು ಮುಕ್ರಿಚ್ಚ ಅವರು ತಮ್ಮ ಉತ್ತಮ ನಡತೆಯಿಂದ ದೊಡ್ಡ ಶಿಷ್ಯಗಣವನ್ನೇ ಸಂಪಾದಿಸಿದ್ದರು. ಇಂತಹ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಹಿನ್ನೆಲೆಯುಳ್ಳ ಗೌರವಾನ್ವಿತ ಕುಟುಂಬದ ಮೂರನೇ ತಲೆಮಾರಿನ ಕುಡಿಯಾದ ರಿಯಾಜ್, ಇಂದು ಅಬುದಾಬಿಯಲ್ಲಿ ರೈಲ್ವೆ ಪೈಲಟ್ (ಲೋಕೋ ಪೈಲಟ್) ಆಗಿ ಉನ್ನತ ಹುದ್ದೆ ಅಲಂಕರಿಸಿ ಜಾಗತಿಕ ಮಟ್ಟದಲ್ಲಿ ಊರಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಯುಎಇಯ ರಾಷ್ಟ್ರೀಯ ಪ್ರಯಾಣಿಕರ ರೈಲು ಜಾಲದ ಉದ್ಘಾಟನಾ ರೈಲನ್ನು ಓಡಿಸಲು ರಿಯಾಜ್ ಅವರನ್ನು ಆಯ್ಕೆ ಮಾಡಿರುವುದು ಅವರ ವೃತ್ತಿಜೀವನದ ಅತ್ಯುನ್ನತ ಮೈಲಿಗಲ್ಲಾಗಿದೆ. ಆದರೆ, ಇಂತಹ ಪ್ರತಿಷ್ಠಿತ ಜವಾಬ್ದಾರಿ ರಿಯಾಜ್ ಅವರಿಗೆ ಹೊಸದೇನಲ್ಲ.
ಇವರು ಈ ಹಿಂದೆ ಕತಾರ್ ಮೆಟ್ರೋ ಮತ್ತು ಕತಾರ್ ಟ್ರಾಮ್ ಜಾಲಗಳ ಉದ್ಘಾಟನಾ ಕಾರ್ಯಾಚರಣೆಯ ಸಂದರ್ಭದಲ್ಲೂ ಮುಖ್ಯ ಕ್ಯಾಪ್ಟನ್ ಆಗಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.

  • ಇಂತಹ ಉನ್ನತ ಮಟ್ಟದ ಮತ್ತು ಸವಾಲಿನ ಸಾರಿಗೆ ಉದ್ಘಾಟನೆಗಳನ್ನು ನಿಭಾಯಿಸಿದ ಅವರ ಅಪಾರ ಅನುಭವವೇ, ಎತಿಹಾದ್ ರೈಲಿನ ಚೊಚ್ಚಲ ಪ್ರಯಾಣಕ್ಕೆ ಅವರು ಆಯ್ಕೆಯಾಗಲು ಪ್ರಮುಖ ಕಾರಣವಾಗಿದೆ. ವಿದೇಶಿ ನೆಲದಲ್ಲಿ ಕನ್ನಡದ ಧ್ವಜವನ್ನು ಎತ್ತಿಹಿಡಿದ ರಿಯಾಜ್ ನಜೀರ್ ಅವರ ಮುಂದಿನ ವೃತ್ತಿಜೀವನವು ಮತ್ತಷ್ಟು ಯಶಸ್ಸಿನಿಂದ ಕೂಡಿರಲಿ ಎಂದು ಹಾರೈಸೋಣ.

Leave a Reply

Your email address will not be published. Required fields are marked *