ಕಾಸರಗೋಡು: ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ (DC Office) ಶುಕ್ರವಾರ ಸಂಜೆ ಬಂದ ಬಾಂಬ್ ಬೆದರಿಕೆ ಕರೆಯೊಂದು ಕೆಲಕಾಲ ತೀವ್ರ ಆತಂಕಕ್ಕೆ ಕಾರಣವಾಯಿತು. ಆದರೆ, ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ತಪಾಸಣೆಯ ನಂತರ ಇದೊಂದು ಹುಸಿ ಬೆದರಿಕೆ ಎಂಬುದು ದೃಢಪಟ್ಟಿದೆ.

​ಶುಕ್ರವಾರ ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯ ಅಧಿಕೃತ ಇ-ಮೇಲ್‌ಗೆ ಅನಾಮಧೇಯ ಸಂದೇಶವೊಂದು ಬಂದಿದ್ದು, ಕಚೇರಿಯಲ್ಲಿ ಬಾಂಬ್ ಇರಿಸಿರುವುದಾಗಿ ಅದರಲ್ಲಿ ಬೆದರಿಕೆ ಹಾಕಲಾಗಿತ್ತು. ಈ ಸಂದೇಶವನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಬಾಂಬ್ ಸ್ಕ್ವಾಡ್:

ವಿಷಯ ತಿಳಿದ ಕೂಡಲೇ ಕಾಸರಗೋಡು ಪೊಲೀಸರು, ಬಾಂಬ್ ನಿಷ್ಕ್ರಿಯ ದಳ (Bomb Squad) ಮತ್ತು ಶ್ವಾನ ದಳ (Dog Squad) ಸ್ಥಳಕ್ಕೆ ದೌಡಾಯಿಸಿ ಕಚೇರಿಯ ಮೂಲೆ ಮೂಲೆಯನ್ನೂ ತಪಾಸಣೆ ನಡೆಸಿದರು. ಸುದೀರ್ಘ ಪರಿಶೀಲನೆಯ ನಂತರ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಇದೊಂದು ನಕಲಿ ಬೆದರಿಕೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಉಕ್ರೇನ್ ಮೂಲದ ಇ-ಮೇಲ್?

ಪ್ರಾಥಮಿಕ ತನಿಖೆಯ ಪ್ರಕಾರ, ಬೆದರಿಕೆ ಸಂದೇಶವು ಉಕ್ರೇನ್ ದೇಶದಿಂದ ಬಂದಿರುವ ಶಂಕೆ ವ್ಯಕ್ತವಾಗಿದೆ. ಸೈಬರ್ ಕ್ರೈಮ್ ವಿಭಾಗವು ಇ-ಮೇಲ್‌ನ ಮೂಲವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದು, ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದೆ.

​ಇತ್ತೀಚೆಗೆ ಕಾಸರಗೋಡು ಜಿಲ್ಲಾ ನ್ಯಾಯಾಲಯಕ್ಕೂ ಇದೇ ರೀತಿಯ ನಕಲಿ ಬಾಂಬ್ ಬೆದರಿಕೆ ಬಂದಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು. ಸತತವಾಗಿ ಸರ್ಕಾರಿ ಕಚೇರಿಗಳನ್ನು ಗುರಿಯಾಗಿಸಿ ಇಂತಹ ಹುಸಿ ಬೆದರಿಕೆಗಳು ಬರುತ್ತಿರುವುದು ಆಡಳಿತ ವರ್ಗದಲ್ಲಿ ಆತಂಕ ಮೂಡಿಸಿದೆ.

Leave a Reply

Your email address will not be published. Required fields are marked *