
ಈ ಜಗತ್ತಿನಲ್ಲಿ ಬದುಕಿರುವ ಪ್ರತಿಯೊಂದು ಜೀವಿಯು ಮನುಷ್ಯನೂ ಸೇರಿದಂತೆ ಏನೇ ಮಾಡಿದರೂ ಮೊದಲು ತನ್ನ ಹೊಟ್ಟೆ ಪಾಡಿಗಾಗಿ, ಹಸಿವು ನೀಗಿಸಿಕೊಳ್ಳಲೆಂದೇ ಮಾಡುತ್ತಾನೆ ಎಲ್ಲದಕ್ಕಿಂತ ಮುಖ್ಯವಾಗಿ ಪ್ರತಿಯೊಬ್ಬರು ಕೂಡ ದುಡಿಯುವ ಮೊದಲ ಉದ್ದೇಶ ಹೊಟ್ಟೆ ಪಾಡು.’ಎಲ್ಲಾರು ಮಾಡುವುದು ಹೊಟ್ಟೆಗಾಗಿ ತುಂಡು ಬಟ್ಟೆಗಾಗಿ ‘ಎಂಬ ದಾಸರ ಸಾಲುಗಳು ಎಷ್ಟು ಅದ್ಭುತ! ಹಾಗಾಗಿ ಈ ನಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಹಗಲಿರುಳೆನ್ನದೆ ಹೋರಾಡುತ್ತೇವೆ.ಹಾಗಾಗಿ ಈ ಆಹಾರ ಎನ್ನುವುದು ಪ್ರತಿಯೊಬ್ಬರಿಗೂ ತುಂಬಾ ಮುಖ್ಯ ಅದಿಲ್ಲದೆ ಜೀವವಿಲ್ಲ ಜೀವನವೂ ಇಲ್ಲ.

ಇದು ಕೇವಲ ಮನುಷ್ಯರಿಗೆ ಸೀಮಿತವಲ್ಲ ಪ್ರಾಣಿ ಪಕ್ಷಿಗಳಿಗು ಕೂಡ.ಮನುಷ್ಯರು ತಮ್ಮ ಹೊಟ್ಟೆ ತುಂಬಿಸಿಕೊಳ್ಳಲು ಒಂದು ರೀತಿಯಲ್ಲಿ ಹೋರಾಡಿದರೆ ಪ್ರಾಣಿಗಳು ಇನ್ನೊಂದು ರೀತಿಯಲ್ಲಿ ಹೋರಾಡುತ್ತವೆ.ಅವು ಕಾಡಿನಲ್ಲಿ ಬದುಕುತ್ತವೆ ನಾವು ನಾಡಿನಲ್ಲಿ. ಆದರೆ ಈಗ ಕಾಲ ಬದಲಾದಂತೆ ಎಲ್ಲವೂ ಬದಲಾಗುತ್ತಿವೆ.ಕಾಡಿನಲ್ಲಿ ಇರಬೇಕಾದ ಭಯಂಕರ ಪ್ರಾಣಿಗಳೆಲ್ಲಾ ನಾಡಿನತ್ತ ಹೆಜ್ಜೆ ಹಾಕುತ್ತಿವೆ! ಯಾವುದನ್ನೂ, ಯಾರನ್ನೂ ಲೆಕ್ಕಿಸದೆ ಇನ್ನಿಲ್ಲದಂತೆ ಹಾವಳಿ ಇಡುತ್ತಿವೆ. ವರ್ಷಗಟ್ಟಲೆ ಕಷ್ಟ ಪಟ್ಟು ಮಾಡಿದ ಕೃಷಿ ಬೆಳೆಗಳನ್ನು ಕ್ಷಣಾರ್ಧದಲ್ಲಿ ಕಾಲ ಕೆಳಗೆ ಹೊಸಕಿ ಹಾಕಿ ಸರ್ವ ನಾಶ ಮಾಡುತ್ತಿವೆ.

ಇದನ್ನೆಲ್ಲಾ ಕಣ್ಣಾರೆ ಕಂಡು ಆ ಪರಿಸ್ಥಿತಿಯನ್ನು ತಾವೇ ಅನುಭವಿಸಿದ ಬಡ ಕೃಷಿಕರ ಪರಿಸ್ಥಿತಿ ಏನಾಗಬೇಕು ಪಾಪ! ಒಂದು ತೆಂಗಿನ ಗಿಡ ನೆಟ್ಟು ಅಥವಾ ಒಂದು ಅಡಿಕೆ ಗಿಡ ನೆಟ್ಟು ಅದು ಫಲ ಕೊಡಬೇಕಾದರೆ ವರ್ಷಗಟ್ಟಲೆ ಕಾಯಬೇಕಾಗುತ್ತದೆ ಹಾಗಿರುವಾಗ ಅದೆಷ್ಟೋ ತೆಂಗಿನ ಮರಗಳು, ಅಡಿಕೆ ಮರಗಳು, ಬಾಳೆ ಗಿಡಗಳನೆಲ್ಲಾ ನೆಲ ಸಮ ಮಾಡಿದರೆ ಬಡ ಕೃಷಿಕರು ಇದನ್ನೆಲ್ಲಾ ಎದುರಿಸುವುದಾದರೂ ಹೇಗೆ? ಇದಕ್ಕೆ ಪರಿಹಾರವಾದರೂ ಏನು?
ನಿಜವಾಗಿ ಈ ವಿಷಯದಲ್ಲಿ ಯಾರ ಪರ ಮಾತನಾಡಲು ಸಾಧ್ಯ?ಯಾರನ್ನು ವಿರೋಧಿಸಲು ಸಾಧ್ಯ? ಕೃಷಿ ಕರನ್ನೇ ?ಅಥವಾ ಬಾಯಿ ಬಾರದ ಮಾತನಾಡಲು ಸಾಧ್ಯವಾಗದ ಮೂಕ ಕಾಡು ಪ್ರಾಣಿಗಳನ್ನೇ? ಹಾಗೆ ನೋಡುವುದಾದರೆ ಪಾಪ ಪ್ರಾಣಿಗಳ ತಪ್ಪೇನಿದೆ ಕಾನನಗಳೆಲ್ಲಾ ನಾಶದ ಅಂಚಿನಲ್ಲಿವೆ ತಿನ್ನಲು ಆಹಾರವಿಲ್ಲ ಹೊಟ್ಟೆ ಹಸಿವು ತಡೆಯಲೂ ಸಾಧ್ಯವಿಲ್ಲ ಹೀಗಿರುವಾಗ ಅವುಗಳು ಕಾಡು ಬಿಟ್ಟು ನಾಡಿಗೆ ಬಾರದೆ ಇನ್ನೇನು ಮಾಡುತ್ತವೆ?
ಆದರೆ ದುರಂತ ಏನೆಂದರೆ ಸಮಸ್ಯೆಗೆ ಪರಿಹಾರ ಕೊಡಬೇಕಾದವರು ಕೆಲವೊಮ್ಮೆ ಕಣ್ಣು ಮುಚ್ಚಿ ಕುಳಿತು ಕೊಳ್ಳುವುದು! ಇಂತಹ ಸಮಸ್ಯೆಯನ್ನು ಗಣನೆಗೆ ತೆಗೆದುಕೊಳ್ಳದೆ ಇರುವುದು.ಕೆಲವರಿಗೆ ಸಮಸ್ಯೆ ಗಳ ಆಳ ತಿಳಿಯುವುದು ಅಲ್ಲಿ ಏನಾದರು ಒಂದು ಅನಾಹುತಗಳು ಸಂಭವಿಸಿದಾಗ, ಸಾವು ನೋವುಗಳಾದಾಗ ಅಲ್ಲಿಯ ವರೆಗೆ ಸಂಬಂಧ ಪಟ್ಟವರಿಗೆ ಯಾವುದೇ ರೀತಿಯ ಗಣನೆಯೇ ಇರುವುದಿಲ್ಲ. ಇದೊಂದು ನಮ್ಮ ದೇಶದ ದೊಡ್ಡ ದುರಂತವೇ ಸರಿ.
ಅದೇನೇ ಇರಲಿ ಇತ್ತೀಚಿನ ದಿನಗಳಲ್ಲಿ ಕೆಲವು ಕಡೆ ಕಾಡು ಪ್ರಾಣಿಗಳ ಉಪಟಳ ಮಿತಿ ಮೀರುತ್ತಿದ್ದು ಇದರಿಂದಾಗಿ ಅನೇಕ ಜನರು ಪ್ರಾಣವನ್ನು ಕೂಡ ಕಳೆದುಕೊಳ್ಳುವಂತಾಗಿದೆ.ಇದೆಲ್ಲಾ ಹೀಗೇ ಮುಂದುವರೆದು ಸಂಬಂಧ ಪಟ್ಟವರು ಸೂಕ್ತ ಕ್ರಮ ಕೈಗೊಳ್ಳದೇ ಹೋದರೆ ಮುಂದೊಂದು ದಿನ ಕಾಡು ಪ್ರಾಣಿಗಳೆಲ್ಲಾ ನಾಡಿಗೆ ಮನುಷ್ಯರೆಲ್ಲಾ ಕಾಡಿಗೆ ಹೋಗುವ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ.
ಪ್ರಾಪ್ತಿ ಗೌಡ
