ಚೆನ್ನೈ: ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಿನ್ನೆ ಭಾನುವಾರ ನಡೆದ ಐಪಿಎಲ್ 2026 ರ ರೋಚಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡವು ಲಕ್ನೋ ಸೂಪರ್ ಜೈಂಟ್ಸ್ (LSG) ವಿರುದ್ಧ 5 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ‘ಮಾಡು ಇಲ್ಲವೇ ಮಡಿ’ ಪಂದ್ಯದಲ್ಲಿ ಗೆಲ್ಲುವ ಮೂಲಕ ಸಿಎಸ್ಕೆ ಪ್ಲೇಆಫ್ ರೇಸ್ನಲ್ಲಿ ತನ್ನ ಭರವಸೆಯನ್ನು ಉಳಿಸಿಕೊಂಡಿದೆ.

ಲಕ್ನೋ ಬ್ಯಾಟಿಂಗ್ ಅಬ್ಬರ:
ಮೊದಲು ಬ್ಯಾಟ್ ಮಾಡಿದ ಲಕ್ನೋ ತಂಡಕ್ಕೆ ಆರಂಭಿಕ ಆಟಗಾರ ಜೋಶ್ ಇಂಗ್ಲಿಸ್ ಸ್ಪೋಟಕ ಆರಂಭ ಒದಗಿಸಿದರು. ಕೇವಲ 33 ಎಸೆತಗಳಲ್ಲಿ 85 ರನ್ ಚಚ್ಚಿದ ಇಂಗ್ಲಿಸ್, ಸಿಎಸ್ಕೆ ಬೌಲರ್ಗಳನ್ನು ಕಾಡಿದರು. ಅಂತಿಮವಾಗಿ ಲಕ್ನೋ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 203 ರನ್ ಗಳ ಬೃಹತ್ ಮೊತ್ತ ಕಲೆಹಾಕಿತು. ಸಿಎಸ್ಕೆ ಪರ ಜೇಮೀ ಓವರ್ಟನ್ 3 ವಿಕೆಟ್ ಪಡೆದು ಮಿಂಚಿದರು.
ಚೆನ್ನೈ ದಿಟ್ಟ ತಿರುಗೇಟು:
204 ರನ್ಗಳ ಕಠಿಣ ಗುರಿ ಬೆನ್ನತ್ತಿದ ಸಿಎಸ್ಕೆ, ಸ್ಪೋಟಕ ಬ್ಯಾಟಿಂಗ್ ಮೂಲಕ ಭರ್ಜರಿ ತಿರುಗೇಟು ನೀಡಿತು. ಉರ್ವಿಲ್ ಪಟೇಲ್ ಕೇವಲ 23 ಎಸೆತಗಳಲ್ಲಿ 65 ರನ್ ಸಿಡಿಸಿದರೆ, ನಾಯಕ ರುತುರಾಜ್ ಗಾಯಕ್ವಾಡ್ 42 ರನ್ ಗಳಿಸಿ ಭದ್ರ ಬುನಾದಿ ಹಾಕಿದರು. ಅಂತಿಮ ಓವರ್ಗಳಲ್ಲಿ ಶಿವಂ ದುಬೆ ಅವರ ಭರ್ಜರಿ ಸಿಕ್ಸರ್ನೊಂದಿಗೆ ಕೇವಲ 19.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಚೆನ್ನೈ ಗೆಲುವಿನ ನಗೆ ಬೀರಿತು.






