ಸುಳ್ಯ: ಸುಳ್ಯದ ಕಾಂತಮಂಗಲ ಸೇತುವೆಯ ಕೆಳಗೆ ಮೊಸಳೆ ಪ್ರತ್ಯಕ್ಷವಾಗಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಬೆನ್ನಲ್ಲೇ, ಈ ಮೊಸಳೆಯನ್ನು ಪತ್ತೆಹಚ್ಚಿದ ರೋಮಾಂಚನಕಾರಿ ಕಥೆಯೊಂದು ಬೆಳಕಿಗೆ ಬಂದಿದೆ!

ಆಟೋದಲ್ಲಿ ಹೋಗುತ್ತಿದ್ದ ಮಹಿಳೆಯ ಸಮಯಪ್ರಜ್ಞೆ:

ಆಟೋರಿಕ್ಷಾದಲ್ಲಿ ಸೇತುವೆ ಮೇಲೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ನದಿಯಲ್ಲಿದ್ದ ವಸ್ತುವನ್ನು ನೋಡಿ ಮೊದಲು ಮರದ ತುಂಡು ಎಂದು ಭಾವಿಸಿದ್ದರು. ಆದರೆ ಅನುಮಾನಗೊಂಡು ಆಟೋವನ್ನು ವಾಪಸ್ ಟರ್ನ್ ಮಾಡಿಸಿ ಸೂಕ್ಷ್ಮವಾಗಿ ಗಮನಿಸಿದಾಗ ಅದು ಬೃಹತ್ ಮೊಸಳೆ ಎಂಬುದು ಖಾತ್ರಿಯಾಗಿದೆ! ತಕ್ಷಣ ಅದನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲಾಗಿದ್ದು, ಆ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

ಅರಣ್ಯ ಇಲಾಖೆಗೆ ಮಾಹಿತಿ:

ಮಹಿಳೆಯ ಸಮಯಪ್ರಜ್ಞೆಯಿಂದಾಗಿ ಕಾಂತಮಂಗಲ ನದಿ ಪಾತ್ರದಲ್ಲಿ ಮೊಸಳೆ ಇರುವುದು ಈಗ ಪಕ್ಕಾ ದೃಢಪಟ್ಟಂತಾಗಿದೆ. ಈ ದೃಶ್ಯ ಹರಿದಾಡುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಅರಣ್ಯ ಇಲಾಖೆಗೆ ತಕ್ಷಣ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವಂತೆ ಹಾಗೂ ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಮೊಸಳೆಯನ್ನು ಸುರಕ್ಷಿತವಾಗಿ ಸೆರೆಹಿಡಿದು ದಟ್ಟ ಅರಣ್ಯದ ನದಿಗೆ ಬಿಡಬೇಕೆಂದು ಒತ್ತಾಯಿಸಿದ್ದಾರೆ.
ನದೀ ತೀರದ ಜನರಿಗೆ ತುರ್ತು ವಿನಂತಿ:

  • ಸಾರ್ವಜನಿಕರು ವಿಶೇಷವಾಗಿ ನದಿ ತೀರದ ನಿವಾಸಿಗಳು, ತೋಟದ ಕೆಲಸಗಾರರು ನದಿಗೆ ಇಳಿಯುವಾಗ ತೀವ್ರ ನಿಗಾ ವಹಿಸಬೇಕು.
  • ನದಿಯ ದಂಡೆಯ ಮೇಲೆ ಮರದ ತುಂಡುಗಳಂತೆ ಕಾಣುವ ವಸ್ತುಗಳಿದ್ದರೂ ಸದ್ಯದ ಪರಿಸ್ಥಿತಿಯಲ್ಲಿ ದೂರದಿಂದಲೇ ಗಮನಿಸಿ, ಅಜಾಗರೂಕತೆಯಿಂದ ಹತ್ತಿರ ಹೋಗಬೇಡಿ. ಆಸುಪಾಸಿನ ಸಾರ್ವಜನಿಕರು ಸದ್ಯಕ್ಕೆ ನದಿಗಿಳಿಯುವುದನ್ನು ತಪ್ಪಿಸಿ, ಜಾಗರೂಕರಾಗಿರಲು ವಿನಂತಿಸಲಾಗಿದೆ.

Leave a Reply

Your email address will not be published. Required fields are marked *