
ಜಾಲ್ಸೂರು: ಜ್ವರ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬಂದ ಮಹಿಳೆಯೊಬ್ಬರಿಗೆ ಅವಧಿ ಮೀರಿದ (Expired) ಔಷಧಿ ನೀಡಲಾಗಿದೆ ಎಂದು ಗಂಭೀರ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸೂಕ್ತ ತನಿಖೆ ನಡೆಸಬೇಕೆಂದು ಜಾಲ್ಸೂರು ಕಾಂಗ್ರೆಸ್ ವಲಯ ಅಧ್ಯಕ್ಷರಾದ ಉಸ್ಮಾನ್ ಅಡ್ಕಾರ್ ಅವರು ಆಗ್ರಹಿಸಿದ್ದಾರೆ.
ಘಟನೆಯ ವಿವರ:
ಕನಕಮಜಲು ನಿವಾಸಿಯಾದ ಬಾತೀಶ ಎಂಬವರ ಪತ್ನಿ ಕಫದ ಸಮಸ್ಯೆಯ ಹಿನ್ನೆಲೆಯಲ್ಲಿ ಸೋಮವಾರ ಜಾಲ್ಸೂರಿನಲ್ಲಿ ಕಾರ್ಯಾಚರಿಸುತ್ತಿರುವ ಖಾಸಗಿ ಕ್ಲಿನಿಕ್ಗೆ ಭೇಟಿ ನೀಡಿ ಔಷಧಿ ಪಡೆದುಕೊಂಡಿದ್ದರು. ಆದರೆ, ಆ ಔಷಧಿಯನ್ನು ಸೇವಿಸಿದ ಬಳಿಕ ಅವರ ದೇಹದಲ್ಲಿ ಅಸಹಜ ಬದಲಾವಣೆ ಹಾಗೂ ತೀವ್ರ ಅಸ್ವಸ್ಥತೆ ಉಂಟಾಗಿದೆ ಎನ್ನಲಾಗಿದೆ.
ಇದರಿಂದ ಸಂಶಯಗೊಂಡು ಔಷಧಿಯ ಬಾಟಲಿಯನ್ನು ಪರಿಶೀಲಿಸಿದಾಗ, ಅದರ ಮೇಲಿದ್ದ ಎಕ್ಸ್ಪೈರಿ ದಿನಾಂಕದ ಜಾಗಕ್ಕೆ ಮಾರ್ಕರ್ ಪೆನ್ನಿನಿಂದ ಉಜ್ಜಿ ಮರೆಮಾಚಿರುವುದು ಪತ್ತೆಯಾಗಿದೆ. ಬಳಿಕ ಅದನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ, ಅದು ಸುಮಾರು ಒಂದೂವರೆ ತಿಂಗಳ ಹಿಂದೆಯೇ ಅವಧಿ ಮುಕ್ತಾಯಗೊಂಡಿದ್ದ ಔಷಧಿ ಎಂಬುದು ಬೆಳಕಿಗೆ ಬಂದಿದೆ ಎಂದು ಸಂತ್ರಸ್ತ ಕುಟುಂಬದವರು ತಿಳಿಸಿದ್ದಾರೆ.
ಇದು ದೊಡ್ಡ ಅಕ್ರಮ – ಉಸ್ಮಾನ್ ಅಡ್ಕಾರ್ ಕಳವಳ:
ಈ ಘಟನೆಯ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿರುವ ಜಾಲ್ಸೂರು ಕಾಂಗ್ರೆಸ್ ವಲಯ ಅಧ್ಯಕ್ಷ ಉಸ್ಮಾನ್ ಅಡ್ಕಾರ್, “ಗ್ರಾಮೀಣ ಪ್ರದೇಶದ ಬಡ ಹಾಗೂ ಸಾಮಾನ್ಯ ಜನರು ವೈದ್ಯರನ್ನು ನಂಬಿ ಚಿಕಿತ್ಸೆಗೆ ಬರುತ್ತಾರೆ. ಇಂತಹ ಸಂದರ್ಭದಲ್ಲಿ ಎಕ್ಸ್ಪೈರಿ ದಿನಾಂಕವನ್ನು ಮಾರ್ಕರ್ನಿಂದ ಅಳಿಸಿ ಔಷಧಿ ನೀಡುವುದು ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡಿದಂತೆ. ಇದು ಅತ್ಯಂತ ದೊಡ್ಡ ಅಕ್ರಮವಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಕೇವಲ ಇವರಿಗಷ್ಟೇ ಅಲ್ಲದೆ ಇನ್ನು ಕೆಲವರಿಗೂ ಇದೇ ರೀತಿ ಅವಧಿ ಮೀರಿದ ಮದ್ದು ನೀಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ. ಈ ಘಟನೆಯನ್ನು ಆರೋಗ್ಯ ಮಂತ್ರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ, ಖುದ್ದಾಗಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು,” ಎಂದು ಕಾಂಗ್ರೆಸ್ ವಲಯ ಸಮಿತಿ ಒತ್ತಾಯಿಸಿದೆ.







