ಬೆಂಗಳೂರು: ಮಹಾರಾಷ್ಟ್ರದಲ್ಲಿ ಕರ್ನಾಟಕದ 50ಕ್ಕೂ ಹೆಚ್ಚು ಅಡಿಕೆ ಲಾರಿಗಳನ್ನು ವಶಪಡಿಸಿಕೊಂಡಿರುವುದರಿಂದ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಮತ್ತು ಮಲೆನಾಡಿನ ಅಡಿಕೆ ಬೆಳೆಗಾರರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕುವ ಭೀತಿ ಎದುರಾಗಿದೆ. ಕೇಂದ್ರದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವೇ ಅಧಿಕಾರದಲ್ಲಿ ಇರುವುದರಿಂದ, ಕರ್ನಾಟಕದ ಬಿಜೆಪಿ ಸಂಸದರು ಮತ್ತು ಕೇಂದ್ರ ಸಚಿವರು ಈ ವಿಷಯದಲ್ಲಿ ತಕ್ಷಣವೇ ಮಧ್ಯಪ್ರವೇಶಿಸಿ ಕೇಂದ್ರ ಹಾಗೂ ಮಹಾರಾಷ್ಟ ಸರಕಾರ ಮಟ್ಟದಲ್ಲಿ ಒತ್ತಡ ಹೇರಬೇಕೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮತ್ತ ಕರ್ನಾಟಕ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ ಶಾಹೀದ್ ತೆಕ್ಕಿಲ್ ಆಗ್ರಹಿಸಿದ್ದಾರೆ.


ಕರ್ನಾಟಕದಿಂದ ಉತ್ತರ ಭಾರತದ ಮಾರುಕಟ್ಟೆಗಳಿಗೆ ಸಾಗಣೆಯಾಗುತ್ತಿದ್ದ ಅಡಿಕೆ ಲಾರಿಗಳನ್ನು ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತ (FDA) ಇಲಾಖೆಯ ಅಧಿಕಾರಿಗಳು ಜಪ್ತಿ ಮಾಡಿರುವುದನ್ನು ತೀವ್ರವಾಗಿ ಖಂಡಿಸಿರುವ ಅವರು, ನಮ್ಮ ರಾಜ್ಯ ಸರಕಾರ, ನಮ್ಮ ಭಾಗದ ಅಡಿಕೆ ಬೆಳೆಗಾರರು ಮತ್ತು ವರ್ತಕರ ಹಿತರಕ್ಷಣೆಗೆ ಯಾವತ್ತು ಬದ್ಧವಾಗಿದೆ ಎಂದು ತಿಳಿಸಿದರು.
ಮಹಾರಾಷ್ಟ್ರದ ಸೋಲಾಪುರ ಸೇರಿದಂತೆ ವಿವಿಧ ಹೆದ್ದಾರಿಗಳಲ್ಲಿ 50ಕ್ಕೂ ಹೆಚ್ಚು ಅಡಿಕೆ ಲಾರಿಗಳನ್ನು ವಿನಾಕಾರಣ ತಡೆದು ನಿಲ್ಲಿಸಲಾಗಿದ್ದು, ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಸೇರಿದಂತೆ ಕರಾವಳಿ ಮತ್ತು ಮಲೆನಾಡಿನ ಅಡಿಕೆ ಮಾರುಕಟ್ಟೆಯ ಮೇಲೆ ತೀವ್ರ ಆರ್ಥಿಕ ಹೊಡೆತ ಬಿದ್ದಿದೆ. ಅಡಿಕೆಗೆ ಸಾಂಪ್ರದಾಯಿಕವಾಗಿ ಹಚ್ಚುವ ‘ಚೊಗರು’ (ಅಡಿಕೆ ಬೇಯಿಸಿದ ನೀರು) ಬಣ್ಣವನ್ನು ಕೃತಕ ರಾಸಾಯನಿಕ ಎಂದು ಮಹಾರಾಷ್ಟ್ರದ ಅಧಿಕಾರಿಗಳು ತಪ್ಪಾಗಿ ಬಿಂಬಿಸುತ್ತಿರುವುದು ಖಂಡನೀಯ. ಈ ಲಾರಿಗಳು ಕೇವಲ ಮಹಾರಾಷ್ಟ್ರದ ಮೂಲಕ ಗುಜರಾತ್, ದೆಹಲಿ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಮಾರುಕಟ್ಟೆಗಳಿಗೆ ತೆರಳುತ್ತಿದ್ದವು. ಬೇರೆ ರಾಜ್ಯಗಳಿಗೆ ಅಧಿಕೃತ ದಾಖಲೆಗಳೊಂದಿಗೆ ಸಾಗಣೆಯಾಗುವ ಸರಕನ್ನು ಹೆದ್ದಾರಿಯಲ್ಲಿ ತಡೆದು, ತಪಾಸಣೆಯ ನೆಪದಲ್ಲಿ ದಿನಗಟ್ಟಲೆ ಕಿರುಕುಳ ನೀಡುವುದು ಕಾನೂನುಬಾಹಿರ, ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಹಾರಾಷ್ಟ್ರದ ಈ ಕ್ರಮದಿಂದಾಗಿ ಸುಳ್ಯ ಮತ್ತು ಮಂಗಳೂರು ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಕುಸಿತ ಕಂಡಿದ್ದು, ಸ್ಥಳೀಯ ಬೆಳೆಗಾರರು ಮತ್ತು ವರ್ತಕರು ಆತಂಕಕ್ಕೆ ಒಳಗಾಗಿದ್ದಾರೆ.
ಈ ನಿಟ್ಟಿನಲ್ಲಿ ಮಾಧ್ಯಮಗಳ ಮೂಲಕ ರೈತರಿಗೆ ಧೈರ್ಯ ತುಂಬಿದ ಶಾಹಿದ್ ತೆಕ್ಕಿಲ್, “ನಮ್ಮ ಭಾಗದ ಸಹಸ್ರಾರು ಅಡಿಕೆ ಬೆಳೆಗಾರರ ಆರ್ಥಿಕತೆ ಈ ಬೆಳೆಯನ್ನೇ ನಂಬಿಕೊಂಡಿದೆ. ಈ ಗಂಭೀರ ಸಮಸ್ಯೆಯನ್ನು ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟವರ ಗಮನಕ್ಕೆ ತರುತ್ತೇನೆ, ಅಡಿಕೆ ಬೆಳೆಗಾರರ ಮತ್ತು ವರ್ತಕರ ಮತ ಪಡೆದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ಕರ್ನಾಟಕದ ಸಂಸತ್ ಸದಸ್ಯರುಗಳು ಧ್ವನಿ ಎತ್ತದೆ ರಾಜ್ಯದ ರೈತರಿಗೆ ಮತ್ತು ಅಡಿಕೆ ಬೆಳೆಗಾರರಿಗೆ ದ್ರೋಹ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು
ಜಪ್ತಿ ಮಾಡಲಾದ ಲಾರಿಗಳನ್ನು ತಕ್ಷಣ ಬಿಡುಗಡೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲು ತನ್ನಿಂದಾಗುವ ಎಲ್ಲಾ ಪರಿಶ್ರಮ ಪಡುತ್ತೇನೆ. ಕರಾವಳಿಯ ಯಾವುದೇ ಅಡಿಕೆ ಬೆಳೆಗಾರರು ಹಾಗೂ ವರ್ತಕರು ಧೃತಿಗೆಡಬೇಕಾಗಿಲ್ಲ, ನಾವು ನಿಮ್ಮೊಂದಿಗಿದ್ದೇವೆ,” ಎಂದು ಸ್ಪಷ್ಟ ಭರವಸೆ ನೀಡಿದ್ದಾರೆ.

Leave a Reply

Your email address will not be published. Required fields are marked *