ಬೆಳ್ಳಾರೆ, ಜೂ. 25: ಹಿದಾಯ ಪಬ್ಲಿಕ್ ಸ್ಕೂಲ್, ಬೆಳ್ಳಾರೆಯಲ್ಲಿ 2026-27ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿ ನಾಯಕತ್ವ ಪದಗ್ರಹಣ ಸಮಾರಂಭವು ವಿಜೃಂಭಣೆಯಿಂದ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಬ್ಯಾರಿ ಸಾಹಿತ್ಯ ಅಕಾಡೆಮಿಯ ಸದಸ್ಯರು ಹಾಗೂ ಶಾಲೆಯ ಶಿಕ್ಷಕ-ರಕ್ಷಕ ಸಂಘದ (PTA) ಅಧ್ಯಕ್ಷರಾದ ಶ್ರೀ ಶರೀಫ್ ಭಾರತ್ ಭಾಗವಹಿಸಿ ಸಸಿ ನೆಡುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು. ಬಳಿಕ ನೂತನವಾಗಿ ಆಯ್ಕೆಯಾದ ವಿದ್ಯಾರ್ಥಿ ನಾಯಕ ಮಂಡಳಿಗೆ ಸ್ಯಾಶ್ ಹಾಗೂ ಬ್ಯಾಡ್ಜ್‌ಗಳನ್ನು ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ 10ನೇ ತರಗತಿಯ ವಿದ್ಯಾರ್ಥಿ ಅಹ್ಮದ್ ಮುಫೀದ್ ವಿದ್ಯಾರ್ಥಿ ನಾಯಕನಾಗಿ ಹಾಗೂ 9ನೇ ತರಗತಿಯ ವಿದ್ಯಾರ್ಥಿ ಅಬ್ದುಲ್ ಶಹೀರ್ ವಿದ್ಯಾರ್ಥಿ ಉಪನಾಯಕನಾಗಿ ಅಧಿಕಾರ ಸ್ವೀಕರಿಸಿದರು.

ಶಾಲಾ ಶಿಕ್ಷಕಿಯರಾದ ಅಫ್ರಿನ್ ಅವರು ಸ್ವಾಗತಿಸಿ, ಅನುಷಾ ಅವರು ಮುಖ್ಯ ಅತಿಥಿಯನ್ನು ಪರಿಚಯಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಸುನೈನಾ ಬಿ. ಅವರು ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿದರು. ಬಳಿಕ ಮಾತನಾಡಿದ ಶ್ರೀ ಶರೀಫ್ ಭಾರತ್ ಅವರು ವಿದ್ಯಾರ್ಥಿಗಳು ನಾಯಕತ್ವ, ಶಿಸ್ತು ಹಾಗೂ ಜವಾಬ್ದಾರಿಯ ಗುಣಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಹಿದಾಯ ಪಬ್ಲಿಕ್ ಸ್ಕೂಲ್‌ನ ಅಧ್ಯಕ್ಷರಾದ ಯು. ಹೆಚ್. ಅಬೂಬಕ್ಕರ್, ಶಿಕ್ಷಕ-ರಕ್ಷಕ ಸಂಘದ ಸದಸ್ಯ ಇಕ್ಬಾಲ್ ಬಾಳಿಲ, ಸಮಿತಿ ಸದಸ್ಯ ಅಝರುದ್ದೀನ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಶಿಕ್ಷಕಿ ಕಮರುನ್ನಿಸಾ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿಕ್ಷಕಿಯರಾದ ರಂಜಿತಾ ಅವರು ಕಾರ್ಯಕ್ರಮ ನಿರೂಪಿಸಿ, ಸಫ್ರೀನಾ ಅವರು ವಂದನಾರ್ಪಣೆ ಸಲ್ಲಿಸಿದರು.

ಶಿಕ್ಷಕರು, ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.

Leave a Reply

Your email address will not be published. Required fields are marked *