ಸುಳ್ಯ : ಕುಂಬರ್ಚೋಡಿನಲ್ಲಿ ರಸ್ತೆ ಅಪಘಾತ ಸಂಭವಿಸಿದ್ದು, ಅಮಲು ಪದಾರ್ಥ ಸೇವಿಸಿ ಕಾರು ಚಾಲಕನೊಬ್ಬ ಮುಂದಿನಿಂದ ಹೋಗುತ್ತಿದ್ದ ಕಾರಿಗೆ ಹಿಂಬದಿಯಿಂದ ಅತಿ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದಾನೆ.

ಸುಳ್ಯ ಜಯನಗರದ ಕುಕ್ಕೇಶ್ರೀ ವಸಂತ ಎಂಬವರು ತಮ್ಮ ಪತ್ನಿ ಹಾಗೂ ಮಕ್ಕಳೊಂದಿಗೆ ಮಡಂತ್ಯಾರಿಗೆ ಆಲ್ಟೊ ಕಾರಿನಲ್ಲಿ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಹಿಂದಿನಿಂದ ಪೇರಾಲು ಉದ್ದಂತಡ್ಕದ ಮಂಜುನಾಥ್ ಎಂಬಾತ ಚಲಾಯಿಸಿಕೊಂಡು ಬರುತ್ತಿದ್ದ ವೋಕ್ಸ್‌ವ್ಯಾಗನ್ ಪೋಲೋ ಕಾರು ಚಾಲಕ ಅಮಲು ಪದಾರ್ಥ ಸೇವಿಸಿ, ವಸಂತ ಅವರ ಕಾರಿಗೆ ರಭಸವಾಗಿ ಗುದ್ದಿದೆ. ಡಿಕ್ಕಿಯ ಹೊಡೆತಕ್ಕೆ ನಿಯಂತ್ರಣ ಕಳೆದುಕೊಂಡ ಕಾರು ಪಕ್ಕದ ವಿದ್ಯುತ್ ಕಂಬ ಹಾಗೂ ಸೂಚನಾ ಫಲಕಕ್ಕೆ ಅಪ್ಪಳಿಸಿದ್ದು, ಕಂಬ ಮುರಿದು ಬಿದ್ದಿದೆ. ಅಪಘಾತಕ್ಕೆ ಕಾರಣವಾದ ಪೋಲೋ ಕಾರು ಕೂಡ ಪಲ್ಟಿಯಾಗಿದೆ.
ಅಪಘಾತದ ಪರಿಣಾಮ ಕುಕ್ಕೇಶ್ರೀ ವಸಂತ ಹಾಗೂ ಅವರ ಕಾರಿನಲ್ಲಿದ್ದ ಕುಟುಂಬಸ್ಥರು ಗಾಯಗೊಂಡಿದ್ದಾರೆ. ತಕ್ಷಣವೇ ನೆರವಿಗೆ ಧಾವಿಸಿದ ಸ್ಥಳೀಯರು, ಗಾಯಾಳುಗಳನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸಾರ್ವಜನಿಕರ ತಡೆ, ಪೊಲೀಸರ ಭೇಟಿ:
ಅಪಘಾತಕ್ಕೆ ಕಾರಣವಾದ ಪೋಲೋ ಕಾರಿನ ಚಾಲಕ ಮಂಜುನಾಥ್ ಅಮಲಿನಿಂದ. ತಾನು ಏನು ಮಾತನಾಡುತ್ತಿದ್ದೇನೆ ಎಂಬ ಪರಿಜ್ಞಾನವೂ ಆತನಿಗಿರಲಿಲ್ಲ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಆತನನ್ನು ಕಾರಿನಿಂದ ಹೊರಬರಲು ಬಿಡದೆ ತಡೆದು ನಿಲ್ಲಿಸಿದರು. ಬಳಿಕ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಚಾಲಕ ಮಂಜುನಾಥ್ ಹಾಗೂ ಆತನ ಜೊತೆಯಲ್ಲಿದ್ದ ಜಯರಾಮ್ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.




