ಬೆಂಗಳೂರು: ಇಲ್ಲಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಐಪಿಎಲ್ 2026ರ 34ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್’ಸಿಬಿ) ತಂಡವು ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್’ಸಿಬಿ ನಾಯಕ ರಜತ್ ಪಾಟಿದಾರ್ ನಿರ್ಧಾರವನ್ನು ಗುಜರಾತ್ ಆರಂಭಿಕರು ಸುಳ್ಳು ಮಾಡಿದರು. ಸಾಯಿ ಸುದರ್ಶನ್ ಅವರ ಅಮೋಘ ಶತಕ (58 ಎಸೆತಗಳಲ್ಲಿ 100 ರನ್) ಹಾಗೂ ನಾಯಕ ಶುಭಮನ್ ಗಿಲ್ (32 ರನ್) ನೆರವಿನಿಂದ ಗುಜರಾತ್ ಟೈಟಾನ್ಸ್ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 205 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇದೇ ವೇಳೆ ಸಾಯಿ ಸುದರ್ಶನ್ ಐಪಿಎಲ್‌ನಲ್ಲಿ ಅತ್ಯಂತ ವೇಗವಾಗಿ 2000 ರನ್ ಪೂರೈಸಿದ ದಾಖಲೆಯನ್ನೂ ತಮ್ಮದಾಗಿಸಿಕೊಂಡರು.
206 ರನ್‌ಗಳ ಬೃಹತ್ ಗುರಿ ಬೆನ್ನತ್ತಿದ ಆರ್’ಸಿಬಿ ಪರ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ವಿರಾಟ್ ಕೊಹ್ಲಿ ಕೇವಲ 44 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 81 ರನ್ ಸಿಡಿಸಿ ಮಿಂಚಿದರು. ಮತ್ತೊಂದೆಡೆ ದೇವದತ್ ಪಡಿಕ್ಕಲ್ 27 ಎಸೆತಗಳಲ್ಲಿ 55 ರನ್ ಚಚ್ಚಿ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟರು. ಕೊನೆಯಲ್ಲಿ ಕೃಣಾಲ್ ಪಾಂಡ್ಯ ಮತ್ತು ಟಿಮ್ ಡೇವಿಡ್ ಜವಾಬ್ದಾರಿಯುತ ಆಟದ ಮೂಲಕ 18.5 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 206 ರನ್ ಗಳಿಸುವ ಮೂಲಕ ಆರ್’ಸಿಬಿ ತವರಿನಲ್ಲಿ ಗೆಲುವಿನ ನಗೆ ಬೀರಿತು. ಪಂದ್ಯ ಶ್ರೇಷ್ಠ ಪ್ರಶಸ್ತಿ ವಿರಾಟ್ ಕೊಹ್ಲಿ ಪಾಲಾಯಿತು.




