ನಮ್ಮ ಸುಳ್ಯ ನ್ಯೂಸ್ ಡೆಸ್ಕ್: 2026ರ ಫಿಫಾ ವಿಶ್ವಕಪ್ ಆರಂಭವಾಗಿರುವ ಬೆನ್ನಲ್ಲೇ ಕ್ರೀಡಾಭಿಮಾನಿಗಳಲ್ಲಿ ಫುಟ್ಬಾಲ್ ಜ್ವರ ದಿನೇ ದಿನೇ ಏರುತ್ತಿದೆ. ಕರಾವಳಿಯಲ್ಲೂ ಫುಟ್ಬಾಲ್ ಕ್ರೇಜ್ ಜೋರಾಗಿರುವಾಗಲೇ, ಅತ್ತ ಬಾಂಗ್ಲಾದೇಶದಲ್ಲಿ ಅಭಿಮಾನಿಗಳ ಹುಚ್ಚು ಮತ್ತೊಂದು ಹಂತಕ್ಕೆ ತಲುಪಿದೆ. ಬಾಂಗ್ಲಾದೇಶದ ಪಟುವಾಖಾಲಿ (Patuakhali) ಜಿಲ್ಲೆಯ ವೈದ್ಯರೊಬ್ಬರು ಅರ್ಜೆಂಟೀನಾ ತಂಡದ ಮೇಲಿನ ತಮ್ಮ ಅಭಿಮಾನವನ್ನು ವಿಶಿಷ್ಟ ರೀತಿಯಲ್ಲಿ ಪ್ರದರ್ಶಿಸುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದ್ದಾರೆ.

ಏನಿದು ರಿಯಾಯಿತಿ ಆಫರ್?

ಪಟುವಾಖಾಲಿ ಮೆಡಿಕಲ್ ಕಾಲೇಜು ಆಸ್ಪತ್ರೆಯ ನೋವು ನಿರ್ವಹಣಾ ತಜ್ಞರಾಗಿರುವ ಡಾ. ಮೊಹಮ್ಮದ್ ಹಬೀಬುರ್ ರೆಹಮಾನ್ ಅವರು ಈ ಬಂಪರ್ ಆಫರ್ ನೀಡಿದ್ದಾರೆ. ತಮ್ಮ ನೆಚ್ಚಿನ ಅರ್ಜೆಂಟೀನಾ ತಂಡದ ಜರ್ಸಿ ಧರಿಸಿ ತಮ್ಮ ಕ್ಲಿನಿಕ್‌ಗೆ ಬರುವ ರೋಗಿಗಳಿಗೆ ಸಮಾಲೋಚನಾ ಶುಲ್ಕದಲ್ಲಿ ಶೇಕಡಾ 50 ರಷ್ಟು ರಿಯಾಯಿತಿ ನೀಡುವುದಾಗಿ ಅವರು ಘೋಷಿಸಿದ್ದಾರೆ.

  • ಸಾಮಾನ್ಯವಾಗಿ ಡಾ. ಹಬೀಬುರ್ ರೆಹಮಾನ್ ಅವರು ಗ್ರೀನ್‌ವ್ಯೂ ಆಸ್ಪತ್ರೆಯಲ್ಲಿ ರೋಗಿಗಳ ತಪಾಸಣೆಗೆ 600 ಟಾಕಾ (ಬಾಂಗ್ಲಾದೇಶದ ಕರೆನ್ಸಿ) ಶುಲ್ಕ ಪಡೆಯುತ್ತಾರೆ.
  • ಆದರೆ ವಿಶ್ವಕಪ್ ಟೂರ್ನಿಯ ಅವಧಿಯಲ್ಲಿ ಅರ್ಜೆಂಟೀನಾ ಜರ್ಸಿ ಧರಿಸಿ ಬರುವ ರೋಗಿಗಳಿಗೆ ಕೇವಲ 300 ಟಾಕಾ ಶುಲ್ಕ ಪಡೆಯಲಿದ್ದಾರೆ.

ಉಚಿತ ಚಿಕಿತ್ಸೆಯೂ ಲಭ್ಯ!

ಇದೇ ರೀತಿ ಮತ್ತೋರ್ವ ವೈದ್ಯ, ಮಿರ್ಜಾಗಂಜ್ ಉಪಜಿಲಾ ಹೆಲ್ತ್ ಕಾಂಪ್ಲೆಕ್ಸ್‌ನ ಡಾ. ಸೈಫುಲ್ ಇಸ್ಲಾಂ ರೋನಿ ಎಂಬುವವರು ಕೂಡ ವಿಶೇಷ ಆಫರ್ ನೀಡಿದ್ದಾರೆ. ವಿಶ್ವಕಪ್ ವೇಳೆ ತಮ್ಮ ಕ್ಲಿನಿಕ್‌ಗೆ ಬರುವ ಅರ್ಜೆಂಟೀನಾ ಅಭಿಮಾನಿಗಳಿಗೆ ಅರ್ಧ ಬೆಲೆಯಲ್ಲಿ ಚಿಕಿತ್ಸೆ ನೀಡುವುದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಅರ್ಜೆಂಟೀನಾ ಪಂದ್ಯವಿರುವ ದಿನಗಳಲ್ಲಿ ತಂಡದ ಜರ್ಸಿ ಧರಿಸಿ ಬರುವ ರೋಗಿಗಳಿಗೆ ಯಾವುದೇ ಸಮಾಲೋಚನಾ ಶುಲ್ಕವಿಲ್ಲದೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡುವುದಾಗಿಯೂ ಆಫರ್ ಕೊಟ್ಟಿದ್ದಾರೆ.
ಬಾಂಗ್ಲಾದೇಶದಲ್ಲಿ ಅರ್ಜೆಂಟೀನಾ ಮತ್ತು ಆ ತಂಡದ ಆಟಗಾರರಿಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಫುಟ್ಬಾಲ್ ಮೇಲಿನ ಪ್ರೀತಿ ಮತ್ತು ಕ್ರೀಡಾ ಮನೋಭಾವವನ್ನು ಹಂಚಿಕೊಳ್ಳಲು ವೈದ್ಯರು ತೆಗೆದುಕೊಂಡಿರುವ ಈ ನಿರ್ಧಾರ ಇದೀಗ ಎಲ್ಲೆಡೆ ವೈರಲ್ ಆಗಿದ್ದು, ಕ್ರೀಡಾಭಿಮಾನಿಗಳ ಹಾಗೂ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.

Leave a Reply

Your email address will not be published. Required fields are marked *