ಹೈದರಾಬಾದ್: ತಮ್ಮ ಪ್ರಾಣದ ಹಂಗು ತೊರೆದು ಮಹಿಳೆಯೊಬ್ಬರ ಸರಗಳ್ಳತನವನ್ನು ತಡೆದ ಆಟೋ ಚಾಲಕನ ಸಾಹಸವೊಂದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಹೈದರಾಬಾದ್‌ನ ಬೇಗಂ ಬಜಾರ್ ಬಳಿ ನಡೆದ ಘಟನೆಯಲ್ಲಿ ಆಟೋ ಚಾಲಕ ಮೊಹಮ್ಮದ್ ಜಹೀರ್ ಶೌರ್ಯ ಮೆರೆದು, ರೌಡಿಶೀಟರ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವ ಮೂಲಕ ರಿಯಲ್ ಹೀರೋ ಎನಿಸಿಕೊಂಡಿದ್ದಾರೆ.
ಮಾರ್ಚ್ 4 ರಂದು ಮುಂಜಾನೆ ಮಂಜು ಓಮ್ಲತಾ ಎಂಬ ಮಹಿಳೆ ವಾಯುವಿಹಾರಕ್ಕೆ ತೆರಳುತ್ತಿದ್ದಾಗ, ದಬೀರ್‌ಪುರದ ರೌಡಿಶೀಟರ್ ಸರಗಳ್ಳ ಆಕೆಯ ಚಿನ್ನದ ಸರ ಕದಿಯಲು ಯತ್ನಿಸಿದ್ದಾನೆ. ಮಹಿಳೆಯ ಚೀರಾಟ ಕೇಳಿದ ಆಟೋ ಚಾಲಕ ಜಹೀರ್, ತಕ್ಷಣವೇ ತಮ್ಮ ವಾಹನವನ್ನು ಹಿಂದಕ್ಕೆ ತಿರುಗಿಸಿ, ವೇಗವಾಗಿ ಬಂದು ಕಳ್ಳನ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಆತ ಪರಾರಿಯಾಗದಂತೆ ತಡೆದಿದ್ದಾನೆ.
ಬಳಿಕ ಕಳ್ಳ ಕಟ್ಟಿಗೆಯಿಂದ ಹಲ್ಲೆ ನಡೆಸಿದರೂ ಆತನನ್ನು ಬಿಡದೆ, ಹೊಡೆದಾಡಿ, ಪೊಲೀಸರು ಬರುವವರೆಗೂ ಹಿಡಿದಿಟ್ಟುಕೊಂಡು, ಘಟನೆಯ ನಂತರ ಯಾವುದೇ ಪ್ರಚಾರ, ಬಹುಮಾನ ಬಯಸದೆ ಜಹೀರ್ ಅಲ್ಲಿಂದ ತೆರಳಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಸತತ ಕಾರ್ಯಾಚರಣೆ ನಡೆಸಿ ಅವರನ್ನು ಪತ್ತೆಹಚ್ಚಿದ ಹೈದರಾಬಾದ್ ಪೊಲೀಸ್ ಕಮಿಷನರ್ ವಿ.ಸಿ. ಸಜ್ಜನಾರ್ ಅವರು ಮಂಗಳವಾರ (ಮೇ 5) ಜಹೀರ್ ಅವರನ್ನು ಕಚೇರಿಗೆ ಕರೆಯಿಸಿ, ಪ್ರಶಂಸನಾ ಪತ್ರ ಹಾಗೂ ನಗದು ಬಹುಮಾನ ನೀಡಿ ಗೌರವಿಸಿದ್ದಾರೆ.






