ಮಂಗಳೂರು: ಅಕ್ರಮವಾಗಿ ಆನೆದಂತಗಳನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಬೃಹತ್ ಜಾಲವೊಂದನ್ನು ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಅಧಿಕಾರಿಗಳು ಯಶಸ್ವಿಯಾಗಿ ಪತ್ತೆಹಚ್ಚಿದ್ದಾರೆ. ಕಾರ್ಯಾಚರಣೆಯ ವೇಳೆ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ ಕೋಟ್ಯಂತರ ರೂಪಾಯಿ ಮೌಲ್ಯದ ಆನೆದಂತ ಹಾಗೂ ಸಾಗಾಟಕ್ಕೆ ಬಳಸಿದ್ದ ಎರಡು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಲಭ್ಯವಾಗಿರುವ ಮಾಧ್ಯಮ ಪ್ರಕಟಣೆ

ಕಾರ್ಯಾಚರಣೆಯ ವಿವರ:

ದಿನಾಂಕ 11-06-2026 ರಂದು ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸರಿಗೆ ವಿಶ್ವಾಸಾರ್ಹ ಮೂಲಗಳಿಂದ ಮಹತ್ವದ ಮಾಹಿತಿ ದೊರಕಿತ್ತು. ಮಂಗಳೂರು ನಗರದ ಪದವು ಗ್ರಾಮದ ಜೋಡುಕಟ್ಟೆ-ಮರೋಳಿ ಹತ್ತಿರ ಕೆಲವರು ಅಕ್ರಮವಾಗಿ ಆನೆದಂತಗಳನ್ನು ಮಾರಾಟ ಮಾಡಲು ಹೊಂಚು ಹಾಕುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಸಾಯಂಕಾಲ 15.30 ಗಂಟೆಗೆ (3:30 PM) ಪೊಲೀಸರು ಮರೋಳಿ ಬಳಿ ಜಂಟಿ ದಾಳಿ ನಡೆಸಿದರು. ಸ್ಥಳದಲ್ಲಿ ಆನೆದಂತ ಮಾರಾಟಕ್ಕೆ ಯತ್ನಿಸುತ್ತಿರುವುದನ್ನು ಖಚಿತಪಡಿಸಿಕೊಂಡ ತಂಡ, ತಕ್ಷಣವೇ ದಾಳಿ ನಡೆಸಿ ಮೂವರು ಆರೋಪಿಗಳನ್ನು ಜಾಲದ ಸಮೇತ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.

ವಶಪಡಿಸಿಕೊಂಡ ಮುದ್ದೆಮಾಲು:

ಬಂಧಿತ ಆರೋಪಿಗಳಿಂದ ಪೊಲೀಸರು 42.700 ಕಿಲೋ ಗ್ರಾಂ ತೂಕದ 02 ಬೃಹತ್ ಆನೆದಂತಗಳನ್ನು ಮುಂದಿನ ಕಾನೂನು ಕ್ರಮಕ್ಕಾಗಿ ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ ದಂತ ಸಾಗಾಟಕ್ಕೆ ಬಳಸಲಾಗಿದ್ದ ಎರಡು ಐಷಾರಾಮಿ ಕಾರುಗಳನ್ನು ಸಹ ಜಪ್ತಿ ಮಾಡಲಾಗಿದೆ.

ಬಂಧಿತ ಆರೋಪಿಗಳ ವಿವರ:

ಬಂಧಿತರನ್ನು ಈ ಕೆಳಗಿನಂತೆ ಗುರುತಿಸಲಾಗಿದೆ:

  1. ಶಶಾಂಕ್ – ಮುದುವೆಟ್ಟು, ಬೆಳ್ತಂಗಡಿ.
  2. ಖಾದರ್ ಯಾನೆ ಅಬ್ದುಲ್ ಖಾದರ್ – ಮಂಜೇಶ್ವರ ತಾಲೂಕು, ಕಾಸರಗೋಡು ಜಿಲ್ಲೆ.
  3. ಪ್ರಭಾಚಂದ್ರ – ಅತ್ತಾವರ, ಜೆಪ್ಪು, ಮಂಗಳೂರು.
    ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಅರಣ್ಯ ಸಂಚಾರಿ ದಳದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಈ ದಂತಗಳನ್ನು ಎಲ್ಲಿಂದ ತರಲಾಗಿತ್ತು ಮತ್ತು ಇದರ ಹಿಂದೆ ಬೇರೆ ಯಾವುದಾದರೂ ಅಂತರರಾಜ್ಯ ದಂಧೆಕೋರರ ಕೈವಾಡವಿದೆಯೇ ಎಂಬ ಬಗ್ಗೆ ತೀವ್ರ ತನಿಖೆ ಕೈಗೊಂಡಿದ್ದಾರೆ.

ಕಾರ್ಯಾಚರಣೆ ತಂಡ:

ಈ ಯಶಸ್ವಿ ಕಾರ್ಯಾಚರಣೆಯು ಬೆಂಗಳೂರಿನ ಸಿಐಡಿ ಅರಣ್ಯ ಘಟಕದ ಮಾನ್ಯ ಪೊಲೀಸ್ ಉಪಮಹಾನಿರೀಕ್ಷಕರು ಹಾಗೂ ಮಡಿಕೇರಿ ಸಿಐಡಿ ಅರಣ್ಯ ಘಟಕದ ಪೊಲೀಸ್ ಅಧೀಕ್ಷಕರಾದ ಶ್ರೀ ಪವನ್ ನೆಜ್ಜೂರು, ಐಪಿಎಸ್ ಅವರ ನೇರ ಮಾರ್ಗದರ್ಶನದಲ್ಲಿ ನಡೆದಿದೆ.
ದಾಳಿಯ ನೇತೃತ್ವವನ್ನು ಮಂಗಳೂರು ಸಿಐಡಿ ಪೊಲೀಸ್ ಅರಣ್ಯ ಸಂಚಾರಿ ದಳದ ಪೊಲೀಸ್ ಉಪನಿರೀಕ್ಷಕರಾದ ಶ್ರೀ ದಿಲೀಪ್ ಜಿ. ಆರ್. ಅವರು ವಹಿಸಿದ್ದರು. ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಜಯರಾಮ ಕೆ.ಟಿ., ಬಾಲಕೃಷ್ಣ ಕೆ.ಎಂ., ತಾರಾನಾಥ ಎಸ್. ಮತ್ತು ಅಬ್ದುಲ್ ರವೂಫ್ ಅವರು ಸಕ್ರಿಯವಾಗಿ ಪಾಲ್ಗೊಂಡು ಯಶಸ್ವಿಗೊಳಿಸಿದ್ದಾರೆ.

Leave a Reply

Your email address will not be published. Required fields are marked *