
ಸುಳ್ಯ: ತಾಲೂಕಿನ ಪೈಚಾರಿನಲ್ಲಿ ರಾತ್ರಿ ವೇಳೆ ನಿಲ್ಲಿಸಿದ್ದ ನಾಲ್ಕು ಭಾರೀ ವಾಹನಗಳ ಬ್ಯಾಟರಿಗಳನ್ನು ದುಷ್ಕರ್ಮಿಗಳು ಕದ್ದೊಯ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಮೇ ೧೪ರ ರಾತ್ರಿ ಪೈಚಾರಿನ ರಸ್ತೆ ಬದಿಯ ಶೆಡ್ ಬಳಿ ನಿಲ್ಲಿಸಲಾಗಿದ್ದ ಎರಡು ಈಚರ್, ಒಂದು ಲಾರಿ ಹಾಗೂ ಒಂದು ೪೦೭ ವಾಹನದ (ಒಟ್ಟು ೪ ವಾಹನಗಳು) ಬ್ಯಾಟರಿಗಳು ಕಳುವಾಗಿವೆ. ಇದರಲ್ಲಿ ೪೦೭ ವಾಹನವು ‘ಸ್ವಾಗತ್ ಶಾಮಿಯಾನ’ ಸಂಸ್ಥೆಗೆ ಸೇರಿದ್ದಾಗಿದೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಮೇ ೧೫ರ ಮುಂಜಾನೆ ೫ ಗಂಟೆಗೆ ಸ್ವಾಗತ್ ಶಾಮಿಯಾನ ಸಂಸ್ಥೆಯ ವಾಹನವು ಕೊಡಗಿನ ಸಿದ್ದಾಪುರಕ್ಕೆ ತೆರಳಬೇಕಿತ್ತು. ಚಾಲಕ ಬಂದು ವಾಹನವನ್ನು ಸ್ಟಾರ್ಟ್ ಮಾಡಲು ಯತ್ನಿಸಿದಾಗ ಬ್ಯಾಟರಿ ಕಳುವಾಗಿರುವುದು ಅರಿವಿಗೆ ಬಂದಿದೆ. ಅನುಮಾನಗೊಂಡು ಅಲ್ಲೇ ಪಕ್ಕದಲ್ಲಿ ನಿಲ್ಲಿಸಿದ್ದ ಉಳಿದ ಮೂರು ವಾಹನಗಳನ್ನು ಪರಿಶೀಲಿಸಿದಾಗ, ಅವುಗಳ ಬ್ಯಾಟರಿಗಳನ್ನು ಕೂಡ ಕಳ್ಳರು ದೋಚಿರುವುದು ಖಚಿತವಾಗಿದೆ.
ಇಲಾಖೆಯ ನಿರ್ಲಕ್ಷ್ಯ.? ಹಾಗೂ ಕಂಗಾಲಾದ ವಾಹನ ಮಾಲೀಕರು.!!
ಇತ್ತೀಚಿನ ದಿನಗಳಲ್ಲಿ ಸುಳ್ಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇಂತಹ ಕಳ್ಳತನ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಲೇ ಇವೆ. ಆದರೆ, ಕಳ್ಳರ ಹಾವಳಿಗೆ ಬ್ರೇಕ್ ಹಾಕುವಲ್ಲಿ ಹಾಗೂ ವಾಹನಗಳಿಗೆ ಭದ್ರತೆ ಒದಗಿಸುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಇಲಾಖೆಯ ಈ ನಿರ್ಲಕ್ಷ್ಯದಿಂದಾಗಿಯೇ ಇಂತಹ ಕೃತ್ಯಗಳು ಎಗ್ಗಿಲ್ಲದೆ ನಡೆಯುತ್ತಿದ್ದು, ವಾಹನ ಮಾಲೀಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಕಳ್ಳರ ವಿರುದ್ಧ ತಕ್ಷಣವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ವಾಹನ ಮಾಲೀಕರು ಹಾಗೂ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.







