ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದ್ದು, ಖ್ಯಾತ ನಟ ದಿಲೀಪ್ ರಾಜ್ (47 ವರ್ಷ) ಅವರು ಇಂದು (ಮೇ 13) ಹೃದಯಾಘಾತದಿಂದ ನಿಧನರಾಗಿದ್ದಾರೆ.

​ಇಂದು ಮುಂಜಾನೆ ಮನೆಯಲ್ಲಿರುವಾಗಲೇ ಅವರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅದಾಗಲೇ ಅವರು ಕೊನೆಯುಸಿರೆಳೆದಿದ್ದರು ಎಂದು ವರದಿಯಾಗಿದೆ.

ಚಿತ್ರರಂಗದ ಪಯಣ:

2005ರಲ್ಲಿ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ನಾಯಕರಾಗಿ ಬೆಳ್ಳಿತೆರೆಗೆ ಕಾಲಿಟ್ಟ ದಿಲೀಪ್ ರಾಜ್, ಪುನೀತ್ ರಾಜ್‌ಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ‘ಮಿಲನ’ (2007) ಚಿತ್ರದಲ್ಲಿನ ಖಳನಾಯಕನ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ‘ಯು-ಟರ್ನ್’ (2016) ಸೇರಿದಂತೆ 24ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ತಮ್ಮ ಅಭಿನಯದ ಛಾಪು ಮೂಡಿಸಿದ್ದರು.

ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲೂ ಬಹಳ ಸಕ್ರಿಯರಾಗಿದ್ದ ಅವರು ‘ಜನನಿ’, ‘ಅರ್ಧ ಸತ್ಯ’, ‘ರಂಗೋಲಿ’, ‘ಮಾಂಗಲ್ಯ’, ‘ಮಳೆಬಿಲ್ಲು’, ‘ರಥಸಪ್ತಮಿ’ ಮತ್ತು ಜನಪ್ರಿಯ ‘ಹಿಟ್ಲರ್ ಕಲ್ಯಾಣ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿ ಕನ್ನಡಿಗರ ಮನೆಮಾತಾಗಿದ್ದರು. ನಟನೆ ಮಾತ್ರವಲ್ಲದೆ, ಡಬ್ಬಿಂಗ್ ಕಲಾವಿದರಾಗಿಯೂ (ಆ ದಿನಗಳು ಚಿತ್ರದಲ್ಲಿ ಚೇತನ್ ಅವರಿಗೆ ಧ್ವನಿ ನೀಡಿದ್ದರು) ಸೈ ಎನಿಸಿಕೊಂಡಿದ್ದರು.

​ಅವರ ಅಕಾಲಿಕ ನಿಧನಕ್ಕೆ ಕನ್ನಡ ಚಿತ್ರರಂಗದ ಗಣ್ಯರು, ಸಹನಟರು ಹಾಗೂ ಅಪಾರ ಸಂಖ್ಯೆಯ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

Leave a Reply

Your email address will not be published. Required fields are marked *