ತೆಲಂಗಾಣ ಮುಖ್ಯಮಂತ್ರಿಗೆ ಆರ್ಯಾಡನ್ ಮೊಹಮ್ಮದ್ ಸ್ಮಾರಕ ಪ್ರಶಸ್ತಿ ಪ್ರದಾನ

News

ಕರ್ನಾಟಕದ ಟಿ.ಎಮ್ ಶಾಹೀದ್ ತೆಕ್ಕಿಲ್ ಭಾಗಿ

ನಿಲಂಬೂರು: ತೆಲಂಗಾಣ ಮುಖ್ಯಮಂತ್ರಿ ಶ್ರೀ ರೇವಂತ್ ರೆಡ್ಡಿ ಅವರಿಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಆರ್ಯಾಡನ್ ಮೊಹಮ್ಮದ್ ಅವರ 3ನೇ ಸ್ಮಾರಕ ಪ್ರಶಸ್ತಿಯನ್ನು ಹಸ್ತಾಂತರಿಸಿದರು.
ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೇರಳದ ಮಾಜಿ ಸಚಿವ ದಿವಂಗತ ಆರ್ಯಾಡನ್ ಮೊಹಮ್ಮದ್ ಅವರ ಸ್ಮರಣಾರ್ಥ ‘ಆರ್ಯಾಡನ್ ಮೊಹಮ್ಮದ್ ಫೌಂಡೇಶನ್’ ವತಿಯಿಂದ ಈ ಪ್ರಶಸ್ತಿಯನ್ನು ನೀಡಲಾಯಿತು.
ರೈತರು, ಹಿಂದುಳಿದ ವರ್ಗಗಳು ಮತ್ತು ಸಾರ್ವಜನಿಕರ ಕಲ್ಯಾಣಕ್ಕಾಗಿ ರೇವಂತ್ ರೆಡ್ಡಿ ಅವರು ಕೈಗೊಂಡಿರುವ ಜನಪರ ಆಡಳಿತ ಹಾಗೂ ನಾಯಕತ್ವವನ್ನು ಗುರುತಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಫೌಂಡೇಶನ್ ಕಾರ್ಯಕಾರಿ ಅಧ್ಯಕ್ಷ ಹಾಗೂ ನಿಲಂಬೂರು ಶಾಸಕ ಆರ್ಯಾಡನ್ ಶೌಕತ್ ತಿಳಿಸಿದ್ದಾರೆ. ಆರ್ಯಾಡನ್ ಮೊಹಮ್ಮದ್ ಅವರ 4ನೇ ಪುಣ್ಯತಿಥಿಯ ಸಂದರ್ಭದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ದಿವಂಗತ ಆರ್ಯಾಡನ್ ಮೊಹಮ್ಮದ್ ಅವರ ರಾಜಕೀಯ ಜೀವನ
ಕೇರಳದ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ದಿವಂಗತ ಆರ್ಯಾಡನ್ ಮೊಹಮ್ಮದ್ ಅವರು ಕಾರ್ಮಿಕ ನಾಯಕರಾಗಿ ಬೆಳೆದು ಬಂದವರು. ಅಸಾಧಾರಣ ಜನಪ್ರಿಯತೆ ಗಳಿಸಿದ್ದ ಅವರು ಕೇರಳ ವಿಧಾನಸಭೆಗೆ 8 ಬಾರಿ ಆಯ್ಕೆಯಾಗಿದ್ದರು. ಅಲ್ಲದೆ, ಕೇರಳದ 4 ಮುಖ್ಯ ಮಂತ್ರಿಗಳ ಜೊತೆಗೆ ಸಚಿವರಾಗಿ ಕಾರ್ಯನಿರ್ವಹಿಸುವ ಮೂಲಕ ರಾಜ್ಯದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ್ದರು.
ಕೇರಳದ ನಿಲಂಬೂರಿನಲ್ಲಿ ನಡೆದ ಈ ಪ್ರತಿಷ್ಠಿತ ಸಮಾರಂಭದಲ್ಲಿ ಕರ್ನಾಟಕ ಕನಿಷ್ಠ ವೇತನ ಸಲಹಾ ಮಂಡಳಿಯ ಅಧ್ಯಕ್ಷರಾದ (ಸಚಿವ ದರ್ಜೆ) ಟಿ.ಎಮ್ ಶಾಹೀದ್ ತೆಕ್ಕಿಲ್ ಅವರು ಭಾಗವಹಿಸಿದ್ದರು.
ಕಂದಾಯ ಸಚಿವ ಎ.ಪಿ. ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಸಂಸದರಾದ ಪಿ.ವಿ. ಅಬ್ದುಲ್ ವಹಾಬ್ ಮತ್ತು ನಿಲಂಬೂರ್ ಶಾಸಕ ಆರ್ಯಾಡನ್ ಶೌಕತ್ ಸೇರಿದಂತೆ ಪ್ರಮುಖ ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *