ಬಾಬೂಜಿಯವರ ಹಸಿರು ಕ್ರಾಂತಿಯಿಂದ ದೇಶ ಆಹಾರದಲ್ಲಿ ಸ್ವಾವಲಂಬನೆ: ಕೆ.ಎಂ. ಮುಸ್ತಫ

ಸುಳ್ಯ: ಮಾಜಿ ಉಪ ಪ್ರಧಾನಿ, ದಲಿತ ನಾಯಕ ಡಾ. ಬಾಬು ಜಗಜ್ಜೀವನ್ ರಾಂ ಅವರ 119ನೇ ಜನ್ಮ ದಿನಾಚರಣೆ ಕಾರ್ಯಕ್ರಮವು ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಜರುಗಿತು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಾಗೂ ಸುಳ್ಯ ತಾಲೂಕು ಆಡಳಿತದ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

​ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಳ್ಯ ನಗರ ಯೋಜನಾ ಪ್ರಾಧಿಕಾರದ (ಸೂಡ) ಅಧ್ಯಕ್ಷರಾದ ಕೆ. ಎಂ. ಮುಸ್ತಫ ಅವರು ಬಾಬೂಜಿಯವರ ಕೊಡುಗೆಗಳನ್ನು ಸ್ಮರಿಸಿದರು. “ಬಾಬೂಜಿಯವರು ಕೃಷಿ ಸಚಿವರಾಗಿದ್ದಾಗ ತಂದ ಹಸಿರು ಕ್ರಾಂತಿಯ ಫಲವಾಗಿ ಇಂದು ನಮ್ಮ ದೇಶ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಅಲ್ಲದೆ, ಅವರು ರಕ್ಷಣಾ ಸಚಿವರಾಗಿ ದೇಶದ ಭದ್ರತೆಗೆ ದೃಢವಾದ ನೀತಿಯನ್ನು ಜಾರಿಗೆ ತಂದರು. 1971ರ ಪಾಕಿಸ್ತಾನದೊಂದಿಗಿನ ಯುದ್ಧವನ್ನು ಯಶಸ್ವಿಯಾಗಿ ನಿಭಾಯಿಸಿ ದೇಶಕ್ಕೆ ಜಯ ತಂದುಕೊಟ್ಟರು. ಎಂತಹ ಕಠಿಣ ಪರಿಸ್ಥಿತಿಯನ್ನೂ ಸಮರ್ಥವಾಗಿ ನಿಭಾಯಿಸುವ ಶಕ್ತಿ ಈ ದೇಶಕ್ಕಿದೆ ಎಂಬುದನ್ನು ಅವರು ತಮ್ಮ ಆಡಳಿತದ ಮೂಲಕ ತೋರಿಸಿಕೊಟ್ಟರು,” ಎಂದು ಬಣ್ಣಿಸಿದರು.

​ಸುಳ್ಯ ತಾಲೂಕು ತಹಶೀಲ್ದಾರ್ ಶ್ರೀಮತಿ ಮಂಜುಳಾ ಕೆ.ಎ.ಎಸ್. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಉಪಸ್ಥಿತರಿದ್ದ ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಮತ್ತು ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ರಾಜಣ್ಣ ಅವರು ಸಂದರ್ಭೋಚಿತವಾಗಿ ಮಾತನಾಡಿ ನಾಯಕನ ಗುಣಗಾನ ಮಾಡಿದರು.

​ಶಿಕ್ಷಣ ಇಲಾಖೆಯ ಶ್ರೀಮತಿ ಮಮತಾ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಡಾ. ಜಗಜ್ಜೀವನ್ ರಾಂ ಅವರ ಬಾಲ್ಯ, ಶಿಕ್ಷಣ ಮತ್ತು ದೇಶಕ್ಕೆ ಅವರು ನೀಡಿದ ಅಪ್ರತಿಮ ಸೇವೆಗಳ ಕುರಿತು ಜೀವನ ಚರಿತ್ರೆಯ ಉಪನ್ಯಾಸ ನೀಡಿದರು.

​ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಕೃಷ್ಣ ಬಿ. ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ಮೇಲ್ವಿಚಾರಕ ವಿಶ್ವನಾಥ್ ಅವರು ವಂದನಾರ್ಪಣೆಗೈದರು.

Leave a Reply

Your email address will not be published. Required fields are marked *