ದುಬೈನಲ್ಲಿ ಅರಂತೋಡು ಎನ್‌ಆರ್‌ಐ ಫೋರಮ್ ವತಿಯಿಂದ ‘ಸ್ನೇಹ ಸಮ್ಮಿಲನ-2026’; ಅರಂತೋಡು ಎನ್‌ಆರ್‌ಐ ಫೋರಮ್‌ನ ಸಮಾಜಮುಖಿ ಕಾರ್ಯಗಳು ಎಂದಿಗೂ ಶ್ಲಾಘನೀಯ: ಟಿ.ಎಂ. ಶಾಹಿದ್ ತೆಕ್ಕಿಲ್

News

ದುಬೈ: ದುಬೈನ ಅಲ್ ಖುಸೈಸ್‌ನಲ್ಲಿ ಎನ್‌ಆರ್‌ಐ ಫೋರಮ್ ಅರಂತೋಡು ಯುಎಇ ವತಿಯಿಂದ ನವೆಂಬರ್ 8 ರಂದು ‘ಸ್ನೇಹ ಸಮ್ಮಿಲನ-2026’ ಕಾರ್ಯಕ್ರಮವು ಅತ್ಯಂತ ಸಡಗರದಿಂದ ಜರುಗಿತು. ಅರಂತೋಡು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅನಿವಾಸಿ ಭಾರತೀಯರಾದ ಸುಮಾರು 50ಕ್ಕೂ ಅಧಿಕ ಸಹೋದರರು ಈ ಸಮ್ಮಿಲನದಲ್ಲಿ ಪಾಲ್ಗೊಂಡು ಪರಸ್ಪರ ಸಂಭ್ರಮ ಹಂಚಿಕೊಂಡರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ ಕರ್ನಾಟಕ ಸರಕಾರದ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ (ಸಚಿವ ಸ್ಥಾನಮಾನ) ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಟಿ.ಎಂ. ಶಾಹಿದ್ ತೆಕ್ಕಿಲ್ ಅವರನ್ನು ಸನ್ಮಾನಿಸಲಾಯಿತು. ಅನ್ವಾರುಲ್ ಯಂಗ್‌ಮೆನ್ಸ್ ಅಸೋಸಿಯೇಷನ್ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಸೈಫುದ್ದೀನ್ ಪಟೇಲ್ ಅವರಿಗೆ, ಟಿ.ಎಂ ಶಾಹೀದ್ ತೆಕ್ಕಿಲ್ ಅವರು ಗೋಲ್ಡನ್ ಸದಸ್ಯತ್ವವನ್ನು ಹಸ್ತಾಂತರಿಸಿದರು. ಇದೇ ವೇಳೆ ಎನ್‌ಆರ್‌ಐ ಫೋರಮ್ ದುಬೈ ಸಮಿತಿಯ ಸಂಚಿಕೆಯನ್ನು ಕೂಡ ಬಿಡುಗಡೆ ಮಾಡಲಾಯಿತು.

ಈ ವೇಳೆ ಮಾತನಾಡಿದ ಟಿ.ಎಂ. ಶಾಹಿದ್ ತೆಕ್ಕಿಲ್ ಅವರು, ಎನ್‌ಆರ್‌ಐ ಫೋರಮ್ ಅರಂತೋಡು ಸಂಘಟನೆಯು ಅರಂತೋಡು ಮಸೀದಿ, ಮದ್ರಸಾ, ಮಿನಾರ ನಿರ್ಮಾಣ, ಮದುವೆ ಹಾಗೂ ಊರಿನಲ್ಲಿ ನಡೆಯುವ ಎಲ್ಲಾ ಸಾಮಾಜಿಕ ಕಾರ್ಯಕ್ರಮಗಳಿಗೆ ನೀಡುತ್ತಿರುವ ಧನ ಸಹಾಯ ಮತ್ತು ಕೊಡುಗೆ ಅಪಾರ ಎಂದು ಪ್ರಶಂಸಿಸಿದರು. ತಮ್ಮ ಕುಟುಂಬದ ನಂಟನ್ನು ಸ್ಮರಿಸಿದ ಅವರು, ತಮ್ಮ ಅಜ್ಜ ತೆಕ್ಕಿಲ್ ಮುಹಮ್ಮದ್ ಹಾಜಿ ಅವರು ಅರಂತೋಡು, ಪೇರಡ್ಕ, ಪೆರಾಜೆ, ಗಾಂಧಿನಗರ ಮಸೀದಿಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.

ಮುಂದುವರಿದು ಮಾತನಾಡಿದ ಅವರು, 50ನೇ ಸ್ವರ್ಣ ಮಹೋತ್ಸವ ಆಚರಿಸುತ್ತಿರುವ ಅನ್ವಾರುಲ್ ಹುದಾ ಯಂಗ್‌ಮೆನ್ಸ್ ಅಸೋಸಿಯೇಷನ್ ತನ್ನ 25ನೇ ವಾರ್ಷಿಕೋತ್ಸವವನ್ನೂ ಅದ್ದೂರಿಯಾಗಿ ಆಚರಿಸಿತ್ತು. ಆಗ ತಾನು ಅದರ ಸ್ವಾಗತ ಸಮಿತಿಯ ಅಧ್ಯಕ್ಷನಾಗಿದ್ದು ಹಲವಾರು ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು, ಇದೀಗ ಸ್ವರ್ಣ ಮಹೋತ್ಸವ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ಕಳೆದ 25 ವರ್ಷಗಳಿಂದ ಇದರ ಗೌರವ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿರುವುದು ನನಗೆ ಹೆಮ್ಮೆ ಇದೆ ಎಂದರು. ಮರ್ಹೂಮ್ ಡಾ. ಕೆ.ಎಂ. ಶಾಹ್ ಮುಸ್ಲಿಯಾರ್ ಅವರ ನೇತೃತ್ವದಲ್ಲಿ 1976ರಲ್ಲಿ ಸ್ಥಾಪನೆಯಾದ ಅನ್ವಾರುಲ್ ಹುದಾ ಯಂಗ್‌ಮೆನ್ಸ್ ಅಸೋಸಿಯೇಷನ್‌ನ ಸ್ಥಾಪಕ ಅಧ್ಯಕ್ಷರಾಗಿ ನನ್ನ ತಂದೆ ತೆಕ್ಕಿಲ್ ಬಾಬಾ ಹಾಜಿ ಹಾಗೂ ಕಾರ್ಯದರ್ಶಿಯಾಗಿ ಹಾಜಿ ಅಹ್ಮದ್ ಕುಞಿ ಪಟೇಲ್ ಅವರು ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.

ಈಗ ಅರಂತೋಡು ಮಸೀದಿಯ ಮೇಲಂತಸ್ತು ಕಾಮಗಾರಿ ಪ್ರಗತಿಯಲ್ಲಿದ್ದು, ವಕ್ಫ್ ಇಲಾಖೆಯಿಂದ ಮಸೀದಿ ಮತ್ತು ಮದ್ರಸಾಗೆ ತಲಾ 5 ಲಕ್ಷ ರೂ. ಅನುದಾನ ಬಿಡುಗಡೆಗೊಂಡಿದ್ದು, ಇದಕ್ಕೆ ಹೆಚ್ಚುವರಿಯಾಗಿ ತಲಾ 5 ಲಕ್ಷ ರೂ. ಇತ್ತೀಚೆಗೆ ಮಂಜೂರಾಗಿದೆ ಎಂದು ತಿಳಿಸಿದರು. ಮುಂದೆಯೂ ಇಂತಹ ಎನ್‌ಆರ್‌ಐ ಸಂಘಟನೆಗಳು ನಮ್ಮ ಊರಿನ ಅಭಿವೃದ್ಧಿಗೆ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಅವರು ಕರೆ ನೀಡಿದರು.

ಈ ಸಮಾರಂಭದಲ್ಲಿ ಖ್ಯಾತ ವಾಗ್ಮಿ  ಎಸ್.ಬಿ. ದಾರಿಮಿ, ಸಮೀರ್ ಪುತ್ತೂರು, ಇಂಕಾಸ್ ಅಧ್ಯಕ್ಷ ರಫೀಕ್ ಮಟ್ಟನೂರ್, ಎನ್ಆರ್’ಐ ಫಾರಂ ಅರಂತೋಡು ಇದರ ಗೌರವ ಅಧ್ಯಕ್ಷ ಬದ್ರುದ್ದೀನ್ ಪಟೇಲ್, ಅಧ್ಯಕ್ಷ ಮುಕ್ತಾರ್ ಪಟೇಲ್, ಸಂಚಾಲಕ ಸೈಫುದ್ದೀನ್ ಪಟೇಲ್, ಕಾರ್ಯದರ್ಶಿ ಸಲಾಹುದ್ದೀನ್ ಪಟೇಲ್, ನಾಸಿರ್ ಪಟೇಲ್, ಅಸ್ಲಾಂ, ಪಯಾಜ್ ಪಟೇಲ್, ಅಶ್ರಫ್, ಸಿನಾನ್ ಕುನ್ನಿಲ್, ರಹೀಮ್ ಉದಯ ನಗರ, ಜಲಾಲುದ್ದೀನ್, ರಿಫಾಯ್ ಗೂನಡ್ಕ, ಅಬ್ಬಾಸ್ ಸರ್ವೆ, ಮಾಹಿನ್ ಸೆಂಟಿಯಾರ್, ಮುಸ್ತಫಾ ವಿಟ್ಲ, ಅಫ್ನಾಸ್, ಆಶಿಕ್ ಹಾಗೂ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *