ಮೂರನೇ ಬಾರಿಗೆ ಶತಕ‌ ವಂಚಿತನಾದ ಸೂರ್ಯವಂಶಿ

ಫೈನಲ್‌ ಪ್ರವೇಶಿಸಿದ ಗುಜರಾತ್‌ ಟೈಟಾನ್ಸ್: ರಾಜಸ್ಥಾನ್‌ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ

ಚಂಡೀಗಢ: ಐಪಿಎಲ್ 2026ರ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಗುಜರಾತ್ ಟೈಟಾನ್ಸ್ ತಂಡ ಫೈನಲ್‌ಗೆ ಲಗ್ಗೆ ಇಟ್ಟಿದೆ. ನಾಯಕ ಶುಭಮನ್‌ ಗಿಲ್ ಅವರ ಆಕರ್ಷಕ ಶತಕದ ಬಲದಿಂದ ಟೈಟಾನ್ಸ್ ಈ ಮಹತ್ವದ ಗೆಲುವು ಒಲಿಸಿಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್, 15 ವರ್ಷದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಅವರ ಸ್ಫೋಟಕ 96 ರನ್‌ಗಳು ಮತ್ತು ರವೀಂದ್ರ ಜಡೇಜಾ ಅವರ ಅಜೇಯ 45 ರನ್‌ಗಳ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 214 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಆದರೆ, 215 ರನ್‌ಗಳ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್, ಆರಂಭಿಕರಾದ ಸಾಯಿ ಸುದರ್ಶನ್ (58) ಮತ್ತು ಶುಭಮನ್ ಗಿಲ್ (104) ಅವರ ಮೊದಲ ವಿಕೆಟ್‌ನ 167 ರನ್‌ಗಳ ಜೊತೆಯಾಟದ ಬಲದಿಂದ ಸುಲಭವಾಗಿ ಗುರಿ ತಲುಪಿತು. ಗಿಲ್ 53 ಎಸೆತಗಳಲ್ಲಿ 15 ಬೌಂಡರಿ ಹಾಗೂ 3 ಸಿಕ್ಸರ್ ಸಿಡಿಸಿ ಪಂದ್ಯಶ್ರೇಷ್ಠ ಎನಿಸಿಕೊಂಡರು.
ಇದೀಗ, ಮೇ 31 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಬೃಹತ್ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ.

Leave a Reply

Your email address will not be published. Required fields are marked *