ಕೇರಳ ವಿಧಾನಸಭಾ ಚುನಾವಣೆ 2026 ರ ಮತ ಎಣಿಕೆ ಕಾರ್ಯ ಮುಕ್ತಾಯ ಹಂತಕ್ಕೆ ಬಂದಿದ್ದು, ಕೊಲ್ಲಂ ಜಿಲ್ಲೆಯ ಚಾತನ್ನೂರ್ ವಿಧಾನಸಭಾ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಬಿಜೆಪಿಯ ಬಿ.ಬಿ. ಗೋಪಕುಮಾರ್ ಅವರು ಭರ್ಜರಿ ವಿಜಯ ಸಾಧಿಸಿದ್ದಾರೆ.

ಬಿ.ಬಿ. ಗೋಪಕುಮಾರ್ ಅವರು ಒಟ್ಟು 51,923 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದ್ದಾರೆ. ಇವರು ತಮ್ಮ ಸಮೀಪದ ಪ್ರತಿಸ್ಪರ್ಧಿಗಳಾದ ಎಲ್‌ಡಿಎಫ್ (ಸಿಪಿಐ) ಅಭ್ಯರ್ಥಿ ಅಡ್ವಕೇಟ್ ಆರ್. ರಾಜೇಂದ್ರನ್ ಹಾಗೂ ಯುಡಿಎಫ್ (ಕಾಂಗ್ರೆಸ್) ಅಭ್ಯರ್ಥಿ ಸೂರಜ್ ರವಿ ಅವರನ್ನು ಮಣಿಸುವ ಮೂಲಕ ಈ ಮಹತ್ವದ ಗೆಲುವು ತಮ್ಮದಾಗಿಸಿಕೊಂಡಿದ್ದಾರೆ.
ಚುನಾವಣಾ ಪೂರ್ವ ಸಮೀಕ್ಷೆಗಳು ಈ ಕ್ಷೇತ್ರದಲ್ಲಿ ಬಿಜೆಪಿಗೆ ಗೆಲುವು ಕಷ್ಟ ಎಂದು ಅಂದಾಜಿಸಿದ್ದವು. ಆದರೆ, ಈ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿರುವ ಬಿಜೆಪಿ, ಚಾತನ್ನೂರ್ ಕ್ಷೇತ್ರದಲ್ಲಿ ಕಮಲ ಅರಳಿಸುವ ಮೂಲಕ ಕೇರಳದಲ್ಲಿ ಭಾರೀ ಮುನ್ನಡೆ ಸಾಧಿಸಿದೆ. ಕಳೆದ ಎರಡು ಚುನಾವಣೆಗಳಲ್ಲಿ ಈ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿ ಜಯಗಳಿಸಿದ್ದರು. ಆದರೆ ಈ ಬಾರಿ ಬಿ.ಬಿ. ಗೋಪಕುಮಾರ್ ಅವರ ಈ ಅಭೂತಪೂರ್ವ ಜಯವು ಎನ್‌ಡಿಎ ಪಾಳೆಯದಲ್ಲಿ ಹೊಸ ಸಂಚಲನ ಮೂಡಿಸಿದೆ.






